ಸಂಪುಟದಲ್ಲಿ ಚರ್ಚಿಸಿ ಪರಿಹಾರ ಘೋಷಣೆ
ಬಾಗಲಕೋಟೆ/ಜಮಖಂಡಿ: ಈಚೆಗೆ ಸುರಿದ ಆಲಿಕಲ್ಲು ಮಿಶ್ರಿತ ಅಕಾಲಿಕ ಮಳೆಗೆ ರಾಜ್ಯದ 13 ಜಿಲ್ಲೆಗಳಲ್ಲಿ ತೋಟಗಾರಿಕೆ ಹಾಗೂ ಇತರ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಬೆಳೆ ಪರಿಹಾರ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ವಿಶೇಷ ಪ್ಯಾಕೇಜ್ ಘೋಷಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಶನಿವಾರ ಬಾಗಲಕೋಟೆ ತಾಲೂಕಿನ ವಿವಿಧೆಡೆ ಹಾಗೂ ಜಮಖಂಡಿ ತಾಲೂಕಿನ ಸಾವಳಗಿ ಪ್ರದೇಶದಲ್ಲಿ ಈಚೆಗೆ ಬಿದ್ದ ಆಲಿಕಲ್ಲು ಮಳೆಯಿಂದಾಗಿ ಆದ ಬೆಳೆ ಹಾನಿಯನ್ನು ವೀಕ್ಷಿಸಿದ ನಂತರ ಅವರು ಸಾವಳಗಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಇತ್ತೀಚೆಗೆ ಸುರಿದ ಆಲಿಕಲ್ಲು ಮಿಶ್ರಿತ ಅಕಾಲಿಕ ಮಳೆಗೆ ದ್ರಾಕ್ಷಿ, ದಾಳಿಂಬೆ, ನಿಂಬೆ, ಚಿಕ್ಕು, ಕಬ್ಬು, ಗೋದಿ, ಜೋಳ, ಕಡ್ಲೆ ಬೆಳೆ ಅಪಾರ ಹಾನಿಯಾಗಿದೆ. 1000 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. ದನ ಮತ್ತು ಕುರಿಗಳು ಮೃತಪಟ್ಟಿವೆ. ಹಾನಿಗೊಳಗಾದ ಮನೆಗಳಿಗೆ ಮತ್ತು ಮೃತಪಟ್ಟ ದನಕರು, ಕುರಿಗಳ ಮಾಲೀಕರಿಗೆ ಪರಿಹಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಿಬ್ಬಂದಿ ಬೆಳೆ ಹಾನಿ ಸರ್ವೇ ಕಾರ್ಯ ಪ್ರಾರಂಭಿಸಿದ್ದಾರೆ. 1.68 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಲಿಕಲ್ಲು ಮಳೆಯಾಗಿದೆ. 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದರು. ಕೃಷಿ ಸಚಿವ ಕೃಷ್ಣ ಭೈರೇಗೌಡ, ಸಚಿವರಾದ ಎಸ್.ಆರ್.ಪಾಟೀಲ್, ಉಮಾಶ್ರೀ, ಶಾಸಕ ಸಿದ್ದು ನ್ಯಾಮಗೌಡ, ಸುಶೀಲಕುಮಾರ ಬೆಳಗಲಿ, ಶ್ರೀಶೈಲ ದಳವಾಯಿ, ಮಹಾದೇವ ಕಲೂತಿ, ಪ್ರಕಾಶ ಕಣಬೂರ, ಪರಮಾನಂದ ಗೌರೋಜಿ, ಬಸವರಾಜ ಮಾಳಿ, ನಜೀರ ಕಂಗನೊಳ್ಳಿ, ಸುರೇಖಾ ನಾಡಗೇರ,ಈಶ್ವರ ಕರಬಸನ್ನವರ, ಜಿಲ್ಲಾಧಿಕಾರಿ ಮನೋಜ ಜೈನ್, ಎಸಿ ಅಶೋಕ ದುಡಗುಂಟಿ ಮುಂತಾದವರು ಉಪಸ್ಥಿತರಿದ್ದರು.
ದ್ರಾಕ್ಷಿ ಹಾನಿ; ಕಣ್ಣೀರಿಟ್ಟ ಮಹಿಳೆ
2 ಎಕರೆ ಭೂಮಿಯಲ್ಲಿ ಸಾಲ ಮಾಡಿ ಬೆಳೆದಿದ್ದ ದ್ರಾಕ್ಷಿ ಬೆಳೆ ಆಲಿಕಲ್ಲು ಮಳೆಯಿಂದಾಗಿ ಹಾನಿಯಾಗಿದೆ ಎಂದು ಶ್ರೀಪಾಲ ಜಮಖಂಡಿ ಅವರ ಪತ್ನಿ ಜಯಶ್ರೀ ಅವರು ಮುಖ್ಯಮಂತ್ರಿ ಎದುರು ಕಣ್ಣೀರಿಟ್ಟರು. ತನ್ನೆರೆಡು ಮಕ್ಕಳು ಪ್ರತಿದಿನ ಸಂರಕ್ಷಣೆ ಮಾಡಿ ಬೆಳೆದ ದ್ರಾಕ್ಷಿ ಬೆಳೆ ಸಂಪೂರ್ಣ ಹಾಳಾಗಿದೆ. ನಮ್ಮನ್ನು ಕಾಪಾಡಬೇಕೆಂದು ಗೋಳಿಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

