ಬಲಗೊಳ್ಳದ ಎಡದಂಡೆ
ರಾಯಚೂರು: ಲೋಕಸಭೆ ಚುನಾವಣೆ ನೀತಿ ಸಂಹಿತೆಯಿಂದಾಗಿ ಪ್ರಸಕ್ತ ವರ್ಷ ಬೇಸಿಗೆಯಲ್ಲಿ ತುಂಗಭದ್ರಾ ಎಡದಂಡೆ ಆಧುನೀಕರಣ ನಿರೀಕ್ಷೆಯಂತೆ ಆರಂಭಗೊಳ್ಳುವುದು ಅನುಮಾನವಾಗಿದೆ. ಚುನಾವಣೆ ಆಯೋಗವು ಜಿಲ್ಲಾಡಳಿತಕ್ಕೆ ಆಧುನೀಕರಣ ಕಾಮಗಾರಿಗೆ ಅನುಮತಿ ನೀಡದಿರುವುದು ಇದಕ್ಕೆ ಕಾರಣ. ಸರ್ಕಾರದ ನಿರ್ಲಕ್ಷ್ಯವೂ ಕಾಮಗಾರಿ ವಿಳಂಬಕ್ಕೆ ದಾರಿ ಮಾಡುತ್ತಿರುವುದು ಬಹಿರಂಗಗೊಂಡಿದೆ.
ದುರಸ್ತಿ ಕಾಮಗಾರಿ ಪ್ರತಿ ಬೇಸಿಗೆಯಲ್ಲಿ ನಡೆಯುತ್ತದೆ. ಕಾಲುವೆಯಲ್ಲಿ ನೀರಿನ ಹರಿವು ಸ್ಥಗಿತಗೊಂಡ ನಂತರವಷ್ಟೇ ಕಾಲುವೆಯ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಅಂಥದೇ ಪ್ರಕ್ರಿಯೆಗೆ ಸರ್ಕಾರ ಈ ಬಾರಿಯೂ ಮುಂದಾಗಿತ್ತು. ಆದರೆ ನೀತಿ ಸಂಹಿತೆಯ ಜಾರಿ ಆಧುನೀಕರಣ ಕಾಮಗಾರಿಗೆ ಅಡ್ಡಿಯಾಗಿದೆ.
ಪ್ರತಿ ವರ್ಷದಂತೆ ರಾಜ್ಯ ಸರ್ಕಾರವು ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯ ಜೀವನಾಡಿ ತುಂಗಭದ್ರಾ ನೀರಾವರಿ ಯೋಜನೆಯಡಿಯ ಕಾಲುವೆಗಳ ಆಧುನೀಕರಣಕ್ಕೆ ಚುನಾವಣೆಯ ಪೂರ್ವದಲ್ಲಿ ಸುಮಾರು 380 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಆದರೆ ಚುನಾವಣೆ ಘೋಷಣೆಯಾಗಿದ್ದರಿಂದ ಕಾಮಗಾರಿಯ ವಿವಿಧ ಹಂತಗಳಿಗೆ ನೀತಿ ಸಂಹಿತೆಯ ಜಾರಿ ಅಡಚಣೆಯಾಯಿತು. ಕಳೆದ ವರ್ಷವೂ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಆಧುನೀಕರಣ ಕಾಮಗಾರಿಗೆ ನೀತಿ ಸಂಹಿತೆ ಅಡ್ಡಿಯಾಗಿತ್ತು. ಆದರೆ ಆ ವೇಳೆ ಜಿಲ್ಲಾಡಳಿತವು ಚುನಾವಣೆ ಆಯೋಗಕ್ಕೆ ಅನುಮತಿ ಕೋರಿ ಪತ್ರ ಬರೆದಿತ್ತು. ಕಾಲುವೆಯ ಆಧುನೀಕರಣದ ಅವಶ್ಯಕತೆ ಮತ್ತು ಅವಕಾಶ ನೀಡದಿದ್ದಲ್ಲಿ ರೈತರಿಗಾಗುವ ತೊಂದರೆಯ ಬಗ್ಗೆ ವಾಸ್ತವಾಂಶ ಮನವರಿಕೆ ಮಾಡಿತ್ತು. ಹಾಗಾಗಿ ಆಗ ಆಯೋಗವು ಅನುಮತಿಸಿತ್ತು.
ತುಂಗಭದ್ರಾ ಎಡದಂಡೆ ಆಧುನೀಕರಣಕ್ಕೆ ಆಯೋಗವು ಅನುಮತಿ ಸದ್ಯಕ್ಕೆ ನೀಡಿಲ್ಲ. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಅನುಮತಿಗೆ ಕೋರಿಕೆ ಸಲ್ಲಿಸಿಲ್ಲವಾದ್ದರಿಂದ ಸಮಸ್ಯೆ ಉದ್ಬವವಾಗಿದೆ. ಈ ಬಗ್ಗೆ ಸರ್ಕಾರದ ಗಮನವನ್ನು ಜಿಲ್ಲಾಡಳಿತ ಸೆಳೆದಿದ್ದು ಶೀಘ್ರವೇ ಆಯೋಗವು ಅನುಮತಿ ನೀಡಲಿದೆ.
-ಎಸ್.ಎನ್. ನಾಗರಾಜು, ರಾಯಚೂರು ಡಿಸಿ
ಜಗನ್ನಾಥ ಆರ್.ದೇಸಾಯಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

