ಚಲನಚಿತ್ರ ನಿರ್ಮಾಪಕ ಸನತ್ಕುಮಾರ್ ನಿಧನ
ಬೆಂಗಳೂರು: ಪತ್ರಕರ್ತ, ಸಾಕ್ಷ್ಯಚಿತ್ರ ನಿರ್ದೇಶಕ, ಚಿತ್ರ ನಿರ್ಮಾಪಕ ಬಿ. ಸನತ್ಕುಮಾರ್ (43) ಬುಧವಾರ ಬೆಳಗ್ಗೆ ನಿಧನ ಹೊಂದಿದರು.
ಅನಾರೋಗ್ಯದಿಂದ ಬಳಲುತ್ತಿದ್ದ ಸನತ್ಕುಮಾರ್, ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಸನತ್ ಅವರ ಒಂದು ಕಾಲನ್ನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯಲಾಗಿತ್ತು. ವಿಶ್ರಾಂತಿಯಲ್ಲಿದ್ದಾಗಲೇ ಕರುಳುಬೇನೆಗೆ ತುತ್ತಾದರು. ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ಮಲ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮೃತರ ಇಚ್ಛೆಯಂತೆ ಸನತ್ ಅವರ ದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ನೀಡಲಾಗಿದೆ. ಖ್ಯಾತ ಪತ್ರಕರ್ತ ಚಿತ್ರದುರ್ಗದ ದಿ. ಬಿ.ವಿ. ವೈಕುಂಠರಾಜು ಪುತ್ರ ಸನತ್ಕುಮಾರ್. ಅಪ್ಪನ ನೆರಳಿನಲ್ಲಿ ಕ್ರಿಕೆಟ್ ಜಗತ್ತಿನ ಬಗ್ಗೆ ಸುದ್ದಿಗಳನ್ನು ಬಿತ್ತರಿಸುವ 'ರಾಜು ಪತ್ರಿಕೆ' ನಡೆಸುತ್ತಿದ್ದರು.
ಪತ್ರಿಕೋದ್ಯಮದಲ್ಲಿ ಇದ್ದುಕೊಂಡೆ ಸಾಕ್ಷ್ಯಚಿತ್ರಗಳ ನಿರ್ಮಾಣ, ನಿರ್ದೇಶನದತ್ತ ವಾಲಿದ್ದ ಸನತ್, ಮೈಸೂರು ದಸರಾ ಕುರಿತು ಸಾಕ್ಷ್ಯಚಿತ್ರ ಮಾಡಿದ್ದಾರೆ. ಅಲ್ಲದೆ ಜಗ್ಗೇಶ್ ಅಭಿನಯದ 'ಎದ್ದೇಳು ಮಂಜುನಾಥ' ಚಿತ್ರ ನಿರ್ಮಾಣ ಮಾಡಿದ್ದಾರೆ. ಆಸ್ಟ್ರೇಲಿಯಾದ ವಿಶೇಷ ಬಾನುಲಿ ಸೇವೆ ರೇಡಿಯೋಗೆ ಭಾರತದಿಂದ ಕನ್ನಡ ಬಾತ್ಮೀದಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
ಪ್ರೆಸ್ ಕ್ಲಬ್ ಸಂತಾಪ: ಬಿ. ಸನತ್ಕುಮಾರ್ ನಿಧನಕ್ಕೆ ಬೆಂಗಳೂರು ಪ್ರೆಸ್ಕ್ಲಬ್ ಸಂತಾಪ ಸೂಚಿಸಿದೆ. ಅತ್ಯಂತ ಚಿಕ್ಕ ವಯಸ್ಸಿಗೆ ಪತ್ರಿಕೋದ್ಯಮಕ್ಕೆ ಬಂದ ಸನತ್, ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ನಿಖರವಾಗಿ ಬರೆಯುತ್ತಿದ್ದರು. ಸನತ್ ನಿಧನದಿಂದ ಪತ್ರಿಕೋದ್ಯಮ ಒಬ್ಬ ಪ್ರತಿಭಾವಂತನನ್ನು ಕಳೆದುಕೊಂಡಂತಾಗಿದೆ ಎಂದು ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ. ಸದಾಶಿವ ಶೆಣೈ ಸಂತಾಪ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

