ಪ್ರಧಾನ ಸುದ್ದಿ

24ರ ಏಕಾದಶಿಗೆ ಮೋದಿ ಪ್ರಮಾಣ?

24ರ ಏಕಾದಶಿಗೆ ಮೋದಿ ಪ್ರಮಾಣ?
Published On :

ನವದೆಹಲಿ: ಮೋದಿ ಪ್ರಧಾನಿಯಾಗಿ ಮೇ 24ರಂದು ಪ್ರಮಾಣ ಸ್ವೀಕರಿಸುವ ಸಾಧ್ಯತೆಯಿದೆ. ಅಂದು ಏಕಾದಶಿಯಾಗಿರುವುದರಿಂದ ಮೋದಿ ಅದೇ ದಿನ ಆರಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಿಜೆಪಿ ಸಂಸದೀಯ ಪಕ್ಷ ಮತ್ತು ಎನ್‌ಡಿಎ ತಮ್ಮ ನಾಯಕನಾಗಿ ಮೋದಿಯವರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಮಂಗಳವಾರ ನಡೆಯಲಿದೆ. ಬಳಿಕ ಅವರು ಸರ್ಕಾರ ರಚನೆಗೆ ರಾಷ್ಟ್ರಪತಿಯವರನ್ನು ಭೇಟಿಯಾಗಿ ಹಕ್ಕು ಮಂಡಿಸಲಿದ್ದಾರೆ. ನಂತರ  ಪ್ರಮಾಣ  ಸ್ವೀಕಾರದ ದಿನ ಘೋಷಿಸಲಾಗುತ್ತದೆ.

ಸಂಪುಟ ಅಜೆಂಡಾ
ಏತನ್ಮಧ್ಯೆ ಬಿಜೆಪಿ ಸಂಸದೀಯ ಪಕ್ಷದ ಸಭೆಯ ಮುನ್ನಾದಿನ ರಾಷ್ಟ್ರ ರಾಜಧಾನಿಯಲ್ಲಿ ಬಿರುಸಿನ ಚಟುವಟಿಕೆ. ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ವಾಸ್ತವ್ಯ ಹೂಡಿರುವ ಚಾಣಕ್ಯಪುರಿಯಲ್ಲಿನ ಗುಜರಾತ್ ಭವನ, ಅಶೋಕ ರಸ್ತೆಯಲ್ಲಿರುವ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ನಿವಾಸ, ಆರ್‌ಎಸ್‌ಎಸ್ ಕಚೇರಿ 'ಕೇಶವ ಕುಂಜ'ಗಳಲ್ಲಿ ಸಾಲುಸಾಲು ಸಭೆಗಳು. ಎಲ್ಲೆಡೆಯೂ ಒಂದೇ ಅಜೆಂಡಾ- ಸಂಪುಟ ರಚನೆ.

 ಸಂಪುಟಕ್ಕಿಲ್ಲ ರಾಜನಾಥ್
ರಾಜನಾಥ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಗೃಹ ಖಾತೆ ನೀಡುವ ಇರಾದೆ ಮೋದಿ ಅವರದ್ದು. ಆದರೆ ಆರ್‌ಎಸ್‌ಎಸ್‌ನ ಒಂದು ಬಣ ಪಕ್ಷದ ಅಧ್ಯಕ್ಷರಾಗಿಯೇ ಮುಂದುವರಿಯಬೇಕೆಂದು ಬಯಸುತ್ತಿದೆ. ಬಹುತೇಕ ಪದಾಧಿಕಾರಿಗಳು ಸರ್ಕಾರದಲ್ಲಿ ಭಾಗಿಯಾಗುವುದರಿಂದ ರಾಜನಾಥ್ ಪಕ್ಷದಲ್ಲಿಯೇ ಉಳಿಯಲಿ ಎನ್ನುವುದು ಅಪೇಕ್ಷೆ. ಸಂಪುಟ ವಿಸ್ತರಣೆ ವೇಳೆ ಸ್ಥಾನ ಕಲ್ಪಿಸುವ ಕುರಿತಾಗಿಯೂ ಮೋದಿ ಬಳಗ ಚಿಂತನೆ ನಡೆಸುತ್ತಿದೆ.
ರಾಜನಾಥ್ ಸಂಪುಟ ಸೇರದಿದ್ದರೆ ಗೃಹ ಖಾತೆಯನ್ನು ತಾವೇ ಇರಿಸಿಕೊಳ್ಳಲು ಮೋದಿ ಉತ್ಸುಕರಾಗಿದ್ದಾರೆ. ಹಾಗಾದರೆ ಆಂತರಿಕ ಭದ್ರತೆಯನ್ನು ಪ್ರತ್ಯೇಕಿಸಬಹುದು. ಸುಷ್ಮಾ ಗೃಹ, ಹಣಕಾಸು, ವಿದೇಶಾಂಗ, ರಕ್ಷಣೆ ಈ ನಾಲ್ಕರಲ್ಲಿ ಒಂದನ್ನು ಬಯಸಿದ್ದಾರೆ. ಆದರೆ ಸುಷ್ಮಾ ಸ್ವರಾಜ್‌ಗೆ ಮಾನವ ಸಂಪನ್ಮೂಲ ಖಾತೆ ನೀಡುವ ಸಾಧ್ಯತೆ ಹೆಚ್ಚಿದೆ. ಒಂದೊಮ್ಮೆ ರಾಜನಾಥ್ ಸಂಪುಟ ಸೇರಿದರೆ, ನಿತಿನ್ ಗಡ್ಕರಿ ಪಕ್ಷಾಧ್ಯಕ್ಷತೆ ಬಯಸಿದ್ದಾರೆ. ಅಮಿತ್ ಶಾಗೆ ಹೆಚ್ಚಿನ ಹೊಣೆ ಇಂಗಿತವನ್ನು ಮೋದಿ ವ್ಯಕ್ತಪಡಿಸಿದ್ದಾರೆ.

ಏನೇನಾಯ್ತು?
-ಗುಜರಾತ್ ಭವನದಲ್ಲಿ ಅಮಿತ್ ಶಾ ಮತ್ತು ಅರುಣ್ ಜೇಟ್ಲಿ ಜತೆ ಬೆಳ್ಳಂಬೆಳಗ್ಗೆ ಮೋದಿ ಸುದೀರ್ಘ ಸಮಾಲೋಚನೆ. ಸಂಜೆ ಆರೆಸ್ಸೆಸ್ ಪ್ರಮುಖರ ಭೇಟಿಯಾದ ಶಾ, ಜೇಟ್ಲಿ
-ಸುಷ್ಮಾ ಸ್ವರಾಜ್, ಕಲ್ಯಾಣ್‌ಸಿಂಗ್, ರಾಂವಿಲಾಸ್ ಪಾಸ್ವಾನ್ ಜಗನ್‌ಮೋಹನ್ ರೆಡ್ಡಿ ಮೊದಲಾದವರ ಮೋದಿ ಭೇಟಿ
-ರಾಜನಾಥ್ ಸಿಂಗ್ ಭೇಟಿ ಮಾಡಿದ ಸುಷ್ಮಾ ಸ್ವರಾಜ್, ಉಮಾಭಾರತಿ, ಗೋಪಿನಾಥ ಮುಂಡೆ, ಯೋಗಿ ಆದಿತ್ಯನಾಥ್, ವರುಣ್ ಗಾಂಧಿ, ನಜ್ಮಾ ಹೆಫ್ತುಲ್ಲಾ, ಸಿ.ಪಿ.ಠಾಕೂರ್, ವಿಜಯ್ ಗೋಯಲ್
-ಹೊಸದಾಗಿ ಚುನಾಯಿತರಾಗಿರುವ ಸಂಸದರೊಂದಿಗೆ ಚರ್ಚೆ ನಡೆಸಿದ ಆರ್‌ಎಸ್‌ಎಸ್ ಪ್ರಮುಖರು

ಮೋದಿ-ಗೃಹ ಕಾರ್ಯದರ್ಶಿ ಭೇಟಿ
ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್ ಗೋಸ್ವಾಮಿ, ಮೋದಿಯವರನ್ನು ಸೋಮವಾರ ಭೇಟಿ ಮಾಡಿದ್ದರು. ಅರ್ಧ ಗಂಟೆ ಭೇಟಿಯಲ್ಲಿ ಜಮ್ಮು-ಕಾಶ್ಮೀರ, ನಕ್ಸಲ್ ಪೀಡಿತ ಪ್ರದೇಶಗಳೂ ಸೇರಿದಂತೆ ಆಂತರಿಕ ಭದ್ರತಾ ಪರಿಸ್ಥಿತಿ, ಆಂಧ್ರ ವಿಭಜನೆ ಪ್ರಕ್ರಿಯೆ ಕುರಿತು ವಿವರಿಸಿದರು. ಉಗ್ರಗಾಮಿ ಸಂಘಟನೆಗಳನ್ನು ಹತ್ತಿಕ್ಕುವುದು, ಗಡಿಯಲ್ಲಿ ಉಗ್ರರ ನುಸುಳುವಿಕೆ ತಡೆಯುವ ಕ್ರಮಗಳ ಕುರಿತಾಗಿಯೂ ಚರ್ಚೆ ನಡೆದಿದೆ. ಗೃಹ ಸಚಿವಾಲಯ ಇದನ್ನು 'ಪ್ರತಿ ಬಾರಿ ಪ್ರಧಾನಿ ಅಭ್ಯರ್ಥಿ ಆಯ್ಕೆಯಾದಾಗ ನಡೆಯುವ ಔಪಚಾರಿಕ ಪ್ರಕ್ರಿಯೆ' ಎಂದು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.