ನೀವೇ ಗತಿ ಎಂದ ಸಿಡಬ್ಲ್ಯೂಸಿ, ಅದೇ ರಾಗಾ, ಅದೇ ಹಾಡು

-ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ ನಂತರ ಸೇರಿದ್ದ ಕಾಂಗ್ರೆಸ್ ಕಾರ್ಯಕಾರಿಣಿ ನಿರೀಕ್ಷಿಸಿದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ, ರಾಹುಲ್ಗಾಂಧಿ ಅವರಿಗೆ ನಿಷ್ಠೆ ವ್ಯಕ್ತಪಡಿಸುವ ಒಂದಂಶದೊಂದಿಗೆ ಕೊನೆಗೊಂಡಿದೆ. ಸೋಲಿನ ನೈತಿಕ ಹೊಣೆ ಹೊತ್ತು ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ರಾಜಿನಾಮೆ ಸಲ್ಲಿಸಲು ಮುಂದಾದರೂ ಕಾರ್ಯಕಾರಿಣಿ ಸಭೆ ತಿರಸ್ಕರಿಸಿದೆ. ಜತೆಗೆ ಉಭಯ ನಾಯಕರೇ ಮುಂದೆಯೂ ಪಕ್ಷವನ್ನು ಮುನ್ನಡೆಸುವಂತೆ ಕೋರಿದೆ. ಈ ಹಂತದಲ್ಲಿ ರಾಜಿನಾಮೆ ನೀಡಿದರೆ ಪಕ್ಷದ ಸಂಘಟನೆಗೆ ತೊಡಕಾಗಬಹುದು, ರಾಜಿನಾಮೆ ನೀಡುವುದು ಬೇಡ, ಎಐಸಿಸಿಯನ್ನು ಪುನಾರಚಿಸಿ ಅಗತ್ಯ ಬದಲಾವಣೆ ಮಾಡುವುದು ಒಳಿತು ಎಂಬ ಹಿರಿಯ ಕಾಂಗ್ರೆಸ್ ನಾಯಕರ ಮಾತಿಗೆ ಒಪ್ಪಿದರೆಂದು ಉನ್ನತ ಮೂಲಗಳು ತಿಳಿಸಿವೆ. ಶೀಘ್ರವೇ ಮತ್ತೊಮ್ಮೆ ಕಾರ್ಯಕಾರಣಿ ನಡೆಯಲಿದ್ದು ಆಗ ಪಕ್ಷ ಬಲವರ್ಧನೆಗೆ ಮಾರ್ಗಸೂಚಿ ಪ್ರಕಟಿಸಲಿದ್ದಾರೆ. ಆಮೂಲಾಗ್ರ ಸಂಘಟನೆಯಲ್ಲಿ ಬದಲಾವಣೆ ತರಲಿದ್ದಾರೆಂದೂ ಆ ಮೂಲಗಳು ಹೇಳಿವೆ.
ಸೋನಿಯಾಗೆ ಹೊಣೆ
ಪಕ್ಷ ಪುನಶ್ಚೇತನಗೊಳಿಸಲು ಮಾರ್ಗಸೂಚಿ ರೂಪಿಸುವ ಹೊಣೆಯನ್ನು ಸೋನಿಯಾಗೆ ವಹಿಸಲಾಗಿದೆ. ಜತೆಗೆ ಪಕ್ಷವನ್ನು ಪುನಾರಚಿಸುವ ಅಧಿಕಾರವನ್ನೂ ನೀಡಲಾಗಿದೆ. ಸಭೆಯಲ್ಲಿ ಎಐಸಿಸಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರೇ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲು ಮುಂದಾದ್ದರಿಂದ ಸೋಲಿನ ಹೊಣೆಯನ್ನು ಬೇರೆಯವರಿಗೆ ವಹಿಸಿ, ಅವರ ರಾಜಿನಾಮೆ ಪಡೆಯುವ ಯಾವ ಪ್ರಕ್ರಿಯೆಯೂ ನಡೆಯಲಿಲ್ಲ. ನಿರ್ಗಮಿಸುತ್ತಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಸೋಲಿಗೆ ತಾವು ಹೊಣೆ ಹೊರುವುದಾಗಿ ತಿಳಿಸಿದರು. ಸಭೆ ಅದನ್ನು ಒಪ್ಪಲಿಲ್ಲ. ಆದರೆ, ಒಟ್ಟಾರೆ ಸಾಮೂಹಿಕ ಹೊಣೆಯ ನಿರ್ಧಾರ ಕೈಗೊಂಡು ಸಭೆಯನ್ನು ಅಂತ್ಯಗೊಳಿಸಲಾಯಿತು. ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಮತ್ತು ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ನಿರ್ಣಯವನ್ನು ಸಭೆ ಅಂಗೀಕರಿಸಿತು.
ಎಲ್ಲವೂ ಬದಲಾಗಲಿದೆ
ಜನರ ತೀರ್ಪನ್ನು ಪಕ್ಷ ಒಪ್ಪಿಕೊಳ್ಳಲಿದೆ. ಎಲ್ಲರೂ ನಿರೀಕ್ಷಿಸುವ ಬದಲಾವಣೆ ಪಕ್ಷದಲ್ಲಿ ಶೀಘ್ರದಲ್ಲೇ ಬರಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ತಿಳಿಸಿದ್ದಾರೆ.
ಸೋನಿಯಾ ಗಾಂಧಿ ನಾಯಕತ್ವದಲ್ಲಿ ಪಕ್ಷ ಮುನ್ನಡೆಯಲಿದೆ. ಅವರ ನಾಯಕತ್ವದಲ್ಲಿಯೇ ಮತ್ತೆ ಸದೃಢಗೊಳ್ಳುತ್ತೇವೆ.
-ಆಸ್ಕರ್ ಫರ್ನಾಂಡಿಸ್, ಎಐಸಿಸಿ ಪ್ರಧಾನ ಕಾರ್ಯದರ್ಶಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


