ಪ್ರಧಾನ ಸುದ್ದಿ

ಹೊಸ ಗಣಿ ಗುತ್ತಿಗೆಗೆ ಹಳೆ ಸರ್ಕಾರ ಅಂಕಿತ

Published On :

ಬಳ್ಳಾರಿ: ಕೇಂದ್ರ ಯುಪಿಎ ಸರ್ಕಾರ ತನ್ನ ಆಡಳಿತವಾಧಿಯ ಕೊನೆಯ ತಿಂಗಳಲ್ಲಿ ಬಳ್ಳಾರಿಯಲ್ಲಿ ಹೊಸ ಗಣಿ ಗುತ್ತಿಗೆಗೆ ಅಂಕಿತ ಹಾಕಿದೆ. ಇದಕ್ಕೆ ರಾಜ್ಯ ಸರ್ಕಾರವೂ ತನ್ನ ಸಹಮತ ಸೂಚಿಸಿದ್ದು ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದ ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿರುವ ಗಣಿ ಕಂಪನಿಗಳಿಗೆ ವಾರ್ಷಿಕ 30 ಮಿಲಿಯನ್ ಟನ್ ಅದಿರು ಮಾತ್ರ ಉತ್ಪಾದನೆ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿರುವ ಬೆನ್ನಲ್ಲೇ ಹೊಸ ಲೀಜ್ ಕೊಟ್ಟಿರುವುದು ಹಾಗೂ ಹೊಸ ಕಂಪನಿ ಯಾವ ಪ್ರಮಾಣದಲ್ಲಿ ಅದಿರು ಉತ್ಪಾದನೆ ಮಾಡಬೇಕೆಂಬುದು ಇದೀಗ ಗೊಂದಲಕ್ಕೆ ಕಾರಣವಾಗಿದೆ.
ಸಿಬಿಐ ತನಿಖೆಯಿಂದ ಗಣಿ ಅಕ್ರಮಗಳಿಗೆ ಸಾಕಷ್ಟು ಕಡಿವಾಣ ಬಿದ್ದಿದೆ. ಗಣಿ ಅಕ್ರಮ ತಡೆಗಟ್ಟುವ ಹಾಗೂ ನೈಸರ್ಗಿಕ ಗಣಿ ಸಂಪತ್ತನ್ನು ಭವಿಷ್ಯಕ್ಕೂ ರಕ್ಷಣೆ ಮಾಡುವ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ಬಳ್ಳಾರಿ ಜಿಲ್ಲೆಯಲ್ಲಿ ವಾರ್ಷಿಕ 25 ಮಿಲಿಯನ್ ಟನ್, ತುಮಕೂರು- ಚಿತ್ರದುರ್ಗ ಜಿಲ್ಲೆಗಳಲ್ಲಿ 5 ಮಿಲಿಯನ್ ಟನ್ ಅದಿರು ಉತ್ಪಾದನೆ ಮಾಡಬೇಕೆಂದು ನಿಗದಿ ಮಾಡಿದೆ. ಹೊಸ ಗಣಿ ಗುತ್ತಿಗೆ ಪ್ರದೇಶದಲ್ಲಿ ಎಷ್ಟು ಪ್ರಮಾಣದ ಅದಿರು ಉತ್ಪಾದನೆ ಮಾಡಬೇಕೆಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೂ ಹೊಸ ಗಣಿ ಗುತ್ತಿಗೆಗೆ ಕೇಂದ್ರ, ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿವೆ.
ಬಿಎಸ್‌ಎಎಲ್‌ಗೆ ಹೊಸ ಗುತ್ತಿಗೆ: ಬಳ್ಳಾರಿಯ ಅನಂತಪುರ ರಸ್ತೆಯಲ್ಲಿರುವ ಬಳ್ಳಾರಿ ಸ್ಟೀಲ್ಸ್ ಮತ್ತು ಅಲಾಯ್ಸ್ ಲಿಮಿಟೆಡ್ ಕಂಪನಿಗೆ ಕೇಂದ್ರ ಅರಣ್ಯ ಇಲಾಖೆ ಸಂಡೂರು ತಾಲೂಕು ವ್ಯಾಪ್ತಿಯ ಡಿಎಂ ಬ್ಲಾಕ್‌ನಲ್ಲಿ 39.43 ಹೆಕ್ಟೇರ್ ಪ್ರದೇಶದಲ್ಲಿ ಹೊಸ ಗಣಿ ಗುತ್ತಿಗೆಗೆ ಜು. 17, 2013ರಂದು ಸಮ್ಮತಿ ನೀಡಿತು. ಇದಕ್ಕೆ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಮೇ 15, 2014ರಂದು ಒಪ್ಪಿಗೆ ಸೂಚಿಸಿದೆ. ಅಕ್ರಮ ಗಣಿಗಾರಿಕೆ ಆರೋಪ ವ್ಯಕ್ತವಾದ ಮೇಲೆ ಗಣಿ ಗುತ್ತಿಗೆ ಪಡೆದ ಮೊದಲ ಕಂಪನಿ ಎಂಬ ಖ್ಯಾತಿಗೆ ಬಿಎಸ್‌ಎಎಲ್ ಪಾತ್ರವಾಗಿದೆ.
ಅದಿರು ಉತ್ಪಾದನೆಗೆ ಹಿನ್ನಡೆ: ಎ ಮತ್ತು ಬಿ ಕೆಟಗರಿಯಲ್ಲಿರುವ ಆರ್ ಆ್ಯಂಡ್ ಆರ್ (ಪರಿಸರ ಪುನಶ್ಚೇತನ ಹಾಗೂ ಪುನರ್ ನಿರ್ಮಾಣ) ಯೋಜನೆ ಅನುಷ್ಠಾನಗೊಳಿಸಿರುವ ಗಣಿ ಕಂಪನಿಗಳು ಮಾತ್ರ ಗಣಿಗಾರಿಕೆ ನಡೆಸುತ್ತಿವೆ. ಈಗ ನ್ಯಾಯಾಲಯ ನಿಗದಿ ಮಾಡುವ 30 ಮಿಲಿಯನ್ ಟನ್ ಅದಿರನ್ನಷ್ಟೇ ಉತ್ಪಾದನೆ ಮಾಡಲಾಗುತ್ತಿದೆ. ಸಿ ಕೆಟಗರಿ ಗಣಿ ಕಂಪನಿಗಳು ಹಾಗೂ ಹೊಸ ಗಣಿ ಗುತ್ತಿಗೆ ಆರಂಭವಾದರೆ ಈ ಮಿತಿ ಸಾಲದು ಎಂಬ ಕಾರಣಕ್ಕಾಗಿ ವಾರ್ಷಿಕ 40 ಮಿಲಿಯನ್ ಟನ್ ಅದಿರು ಉತ್ಪಾದನೆಗೆ ಅನುಮತಿ ನೀಡಬೇಕೆಂದು ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದರೆ, ಸುಪ್ರೀಂ ಕೋರ್ಟ್ ಈ ಮನವಿ ತಿರಸ್ಕರಿಸಿದೆ.
ಇಂಥ ಸಂದರ್ಭದಲ್ಲಿ ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹೊಸದಾಗಿ ಗಣಿಗಾರಿಕೆ ಅನುಮತಿ ಪಡೆದಿರುವ ಕಂಪನಿಗೆ ಯಾವ ರೀತಿ ಅವಕಾಶ ನೀಡುತ್ತದೋ ಎಂಬ ಕುತೂಹಲವಿದೆ.

ಅನುಮತಿ ಕೊಟ್ಟಿದ್ದೇಕೆ?
ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಅದಿರು ಗಣಿಗಾರಿಕೆ ಇದೆ. ಬಳ್ಳಾರಿಯಲ್ಲಿ 100ಕ್ಕೂ ಹೆಚ್ಚು ಗಣಿ ಗುತ್ತಿಗೆ ಕಂಪನಿಗಳ ಪೈಕಿ ಈಗ ಎ ಮತ್ತು ಬಿ ಕೆಟಗರಿಯ 10ರಷ್ಟು ಗಣಿ ಕಂಪನಿಗಳು ಮಾತ್ರ ಅದಿರು ಗಣಿಗಾರಿಕೆ ನಡೆಸುತ್ತಿವೆ. ಇವುಗಳಿಗೆ ವಾರ್ಷಿಕವಾಗಿ 25 ಮಿಲಿಯನ್ ಟನ್ ಅದಿರು ಉತ್ಪಾದನೆ ಮಿತಿ ನಿಗದಿಪಡಿಸಲಾಗಿದೆ. ಚಿತ್ರದುರ್ಗದಲ್ಲಿ 25 ಗಣಿ ಕಂಪನಿಗಳ ಪೈಕಿ ಎರಡು ಮಾತ್ರ ಚಾಲನೆಯಲ್ಲಿವೆ.


ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.