ಹಳೇ ಶೈಲಿ ಬಿಡಿ, ಹೊಸ ಚಿಂತನೆ ಮಾಡಿ

ನವದೆಹಲಿ: ಬೆಳಗ್ಗೆ 9ರಿಂದ ರಾತ್ರಿ 9. ಅದು 'ಮೋದಿ ಸ್ಟೈಲ್'. ಕಚೇರಿಯಲ್ಲಿ ಹಾಜರಿದ್ದು ಖುದ್ದು 12 ಗಂಟೆ ಕೆಲಸ ಮಾಡುವುದು ಮಾತ್ರವಲ್ಲ, ಶಿಷ್ಟಾಚಾರದ ಪೊರೆಯಿಂದ ಹೊರಬಂದು ಅಧಿಕಾರಿಗಳೊಡನೆ ಸಂವಹನ ನಡೆಸುವ ಮೂಲಕ ಪಿಎಂಒ ಸ್ವರೂಪವನ್ನೇ ಬದಲಿಸುತ್ತಿದ್ದಾರೆ ನರೇಂದ್ರ ಮೋದಿ.
ಪ್ರಧಾನಿಯಾದ ದಿನವೇ ತಾವೇನು ಎನ್ನುವುದರ ಸ್ಯಾಂಪಲ್ ತೋರಿಸಿದ್ದ 'ದಣಿವರಿಯದ ಕೆಲಸಗಾರ' ಮೋದಿ, ತಮ್ಮ ಆಪ್ತ ಸಿಬ್ಬಂದಿ ಪಟ್ಟಿ ಇನ್ನೂ ಅಖೈರುಗೊಳ್ಳದಿದ್ದರೂ ಅದನ್ನು ತಲೆ ಕೆಡಿಸಿಕೊಳ್ಳದೆ ಕಾರ್ಯ ಆರಂಭಿಸಿದ್ದಾರೆ. ಬೆಳಗ್ಗೆ 9ಕ್ಕೆಲ್ಲ ಸೌತ್ಬ್ಲಾಕ್ನ ಕಚೇರಿಗೆ ಹಾಜರಾಗಿ ರಾತ್ರಿ 9ರವರೆಗೂ ಕಾರ್ಯನಿರ್ವಹಿಸುತ್ತಿದ್ದಾರೆ.
ಕಡತಗಳ ಪರಿಶೀಲನೆ, ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳೊಂದಿಗೆ ಸಮಾಲೋಚನೆ ಜತೆಯಲ್ಲೇ ಪ್ರಧಾನಿ ಕಾರ್ಯಾಲಯದ (ಪಿಎಂಒ) ಮೂಲೆಮೂಲೆಗೂ ಭೇಟಿ ನೀಡುತ್ತಿದ್ದಾರೆ ಮೋದಿ. ಅಧಿಕಾರಿ, ಸಿಬ್ಬಂದಿ ಜತೆ ಮುಕ್ತವಾಗಿ ಚರ್ಚಿಸಿ ಹೊಸ ಹುರುಪು ಮೂಡಿಸುತ್ತಿದ್ದಾರೆ. ಅಲ್ಲದೆ, ಸಂವಹನಕ್ಕೆ ಈಗ ಇರುವ ವ್ಯವಸ್ಥೆ ಮತ್ತು ಅದರಲ್ಲಿ ತರಬಹುದಾದ ಸುಧಾರಣೆ ಕುರಿತಂತೆಯೂ ಪ್ರಧಾನಿ ಅಧಿಕಾರಿಗಳ ಸಲಹೆ ಬಯಸಿದ್ದಾರೆ.
'ಹಳೆಯ ಯೋಚನಾ ವಿಧಾನಗಳನ್ನು ಬಿಟ್ಟುಬಿಡಿ, ಹೊಸ ರೀತಿಯ ಐಡಿಯಾಗಳೊಂದಿಗೆ ಬನ್ನಿ. ನಿಮ್ಮಲ್ಲಿ ವಿನೂತನ ಯೋಚನೆಗಳಿದ್ದರೆ ಸಮಯದ ಹಂಗಿಲ್ಲದೆ ಯಾವುದೇ ದಿನದ ಯಾವುದೇ ಕ್ಷಣ ನನ್ನೊಂದಿಗೆ ಹಂಚಿಕೊಳ್ಳಬಹುದು' ಎನ್ನುವುದು ಪಿಎಂ ಸೂಚನೆ.
ಗುಜರಾತ್ನ ಸಿಎಂ ಆಗಿದ್ದಾಗ ಬೆ. 10.30 - ರಾ.8ರ ವರೆಗೆ ಅನಧಿಕೃತವಾಗಿ ಸರ್ಕಾರಿ ವೇಳೆಯೇ ಆಗಿಬಿಟ್ಟಿತ್ತು. ಅಧಿಕಾರಿಗಳಿಗೆ ಸ್ವಾತಂತ್ರ್ಯ, ಹೊಣೆಗಾರಿಕೆ ಎರಡನ್ನೂ ನೀಡಿ ಕೆಲಸ ತೆಗೆಯುವುದು ಮೋದಿ ಶೈಲಿ. ಯಾವುದೇ ಪರಿಸ್ಥಿತಿಯನ್ನೂ ಭಯಪಡದೇ ಎದುರಿಸುವಂತೆ ಮಾಡುವುದು. ನವನವೀನ ಚಿಂತನೆಗಳನ್ನು ಉತ್ತೇಜಿಸುವುದು, ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದು ಅವರು ರೂಪಿಸಿರುವ 10 ಅಂಶಗಳ ಸೂತ್ರದಲ್ಲಿ ಸೇರಿವೆ. ಮಾಜಿ ಪ್ರಧಾನಿಗಳಾದ ವಾಜಪೇಯಿ ಮತ್ತು ಡಾ.ಮನಮೋಹನ ಸಿಂಗ್ ರೇಸ್ಕೋರ್ಸ್ ರಸ್ತೆಯಲ್ಲಿರುವ ಗೃಹ ಕಚೇರಿಯಿಂದ ಕಾರ್ಯನಿರ್ವಹಿಸುತ್ತಿದ್ದುದೇ ಹೆಚ್ಚು.
ಅಧಿಕೃತ ನಿವಾಸಕ್ಕೆ ಪ್ರಧಾನಿ
ಕೆಲದಿನಗಳಿಂದ ಚಾಣಕ್ಯಪುರಿಯ ಗುಜರಾತ್ ಭವನದಲ್ಲಿ ತಂಗಿದ್ದ ಪ್ರಧಾನಿ ಮೋದಿ, ರೇಸ್ಕೋರ್ಸ್ ರಸ್ತೆಯಲ್ಲಿನ ಅಧಿಕೃತ ನಿವಾಸಕ್ಕೆ ಶುಕ್ರವಾರ ತೆರಳಿದ್ದಾರೆ. ಹೆಚ್ಚಿನ ಬದಲಾವಣೆಗಳೇನೂ ಅಗತ್ಯವಿಲ್ಲ ಎಂದು ಸೂಚಿಸಿದ್ದರ ಹಿನ್ನೆಲೆಯಲ್ಲಿ ಸುಣ್ಣಬಣ್ಣ ಬಳಿದದ್ದು ಬಿಟ್ಟರೆ ನವೀಕರಣ ಕೈಗೊಂಡಿಲ್ಲ. ಮೋದಿ ನಂ.7 ಬದಲಾಗಿ ನಂ.5 ಬಂಗಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಡಾ.ಮನಮೋಹನ ಸಿಂಗ್ ಅವರು ನಂ.5 ಅನ್ನು ಗೃಹ ಕಚೇರಿಯಾಗಿ, ನಂ.7 ಅನ್ನು ನಿವಾಸವಾಗಿ ಬಳಸುತ್ತಿದ್ದರು. ಪ್ರಧಾನಿ ಅಧಿಕೃತ ನಿವಾಸ ಐದು ಬಂಗಲೆಗಳ ನಂ.1, 3, 5, 7 ಮತ್ತು 9 ಸಮುಚ್ಛಯ.
ದೋವಲ್ ನೇಮಕ
ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಇಂಟಲಿಜೆನ್ಸ್ ಬ್ಯೂರೊದ ಮಾಜಿ ಮುಖ್ಯಸ್ಥ ಅಜಿತ್ಕುಮಾರ್ ದೋವಲ್ ಅವರನ್ನು ಶುಕ್ರವಾರ ನೇಮಕ ಮಾಡಲಾಗಿದೆ. ಗುಜರಾತ್ ಭವನದಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿ ದೇಶ ಎದುರಿಸುತ್ತಿರುವ ಭದ್ರತಾ ಸವಾಲುಗಳ ಕುರಿತು ಮಾಹಿತಿ ನೀಡಿದರು. ಸೇನಾ ಗೌರವ 'ಕೀರ್ತಿ ಚಕ್ರ' ಪಡೆದ ಪ್ರಥಮ ಪೊಲೀಸ್ ಅಧಿಕಾರಿ ಎನ್ನುವ ಹೆಗ್ಗಳಿಕೆ ಹೊಂದಿರುವ ದೋವಲ್, 2005ರಲ್ಲಿ ನಿವೃತ್ತಿ ಹೊಂದಿದ್ದರು. ಇದು ಮೋದಿ ಪ್ರಧಾನಿಯಾದ ಬಳಿಕ ಆಯಕಟ್ಟಿನ ಜಾಗಕ್ಕೆ ನಡೆದ ಎರಡನೇ ನೇಮಕ.
ನಾನೇನು ದೊಡ್ಡವನಲ್ಲ
'ಜೀವಂತ ವ್ಯಕ್ತಿ ಕುರಿತ ಅಧ್ಯಾಯಗಳನ್ನು ಪಠ್ಯದಲ್ಲಿ ಸೇರಿಸುವುದು ಸರಿಯಲ್ಲ ಎಂದು ನಂಬಿರುವವ ನಾನು' ಎಂದು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ತಮ್ಮ ಜೀವನಚರಿತ್ರೆಯನ್ನು ಶಾಲಾ ಪಠ್ಯದಲ್ಲಿ ಸೇರಿಸುವ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿನ ಬಿಜೆಪಿ ಸರ್ಕಾರಗಳು ಅಂಥ ಕ್ರಮ ಕೈ ಬಿಟ್ಟಿವೆ.
ಯೋಜನೆ ಹೆಸರು ಬದಲು ಬೇಡ
ಪಿಎಂಒ ಕಚೇರಿಯಲ್ಲಿ ಹೊಸತನ ತಂದ ಮೋದಿ ಮತ್ತೊಂದು ನಿರ್ಧಾರ ಕೈಗೊಂಡಿದ್ದಾರೆ. ಹೊಸ ಸರ್ಕಾರಗಳು ಬಂದ ಕೂಡಲೇ ಹಿಂದಿನ ಸರ್ಕಾರಗಳು ಜಾರಿಗೆ ತಂದಿದ್ದ ಯೋಜನೆಗಳ ಹೆಸರು ಬದಲಿಸುವುದು ಇದು ವರೆಗಿನ ಸಂಪ್ರದಾಯ. ಆದರೆ ಮೋದಿ ಅದನ್ನು ಮುರಿದಿದ್ದಾರೆ. ಯುಪಿಎ ಸರ್ಕಾರ ಆರಂಭಿಸಿದ್ದ ಯೋಜನೆಗಳ ಹೆಸರು ಬದಲಿಸದಿರುವಂತೆ ಪ್ರಧಾನಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ. 'ಇದು ಹಳೆಯ ಕಾರ್ಯಶೈಲಿ' ಎನ್ನುವುದು ಮೋದಿ ಅಭಿಮತ.
ಜೂ. 3ರಂದು ಜಯಲಲಿತಾ ಪ್ರಧಾನಿ ಭೇಟಿ
ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಆಹ್ವಾನಿಸಿದ್ದನ್ನು ಪ್ರತಿಭಟಿಸಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಬಹಿಷ್ಕರಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಜೂನ್ 3ರಂದು ಭೇಟಿ ಮಾಡಲಿದ್ದಾರೆ. ಎಐಎಡಿಎಂಕೆ ರಾಜ್ಯಸಭೆಯಲ್ಲಿ 10 ಸದಸ್ಯರನ್ನು ಹೊಂದಿರುವುದರಿಂದ ರಾಜಕೀಯ ಮೈತ್ರಿ ಕುರಿತಂತೆಯೂ ಇಬ್ಬರು ಧುರೀಣರು ಚರ್ಚಿಸುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


