ಪ್ರಧಾನ ಸುದ್ದಿ

ಮಂಗಳಕರ ಯಾತ್ರೆಗೆ ಇಂದು ಬೆಳಗಲಿದೆ ಲ್ಯಾಮ್

ಮಂಗಳಕರ ಯಾತ್ರೆಗೆ ಇಂದು ಬೆಳಗಲಿದೆ ಲ್ಯಾಮ್
ಸಾಂದರ್ಭಿಕ ಚಿತ್ರ
Published On :

307 ದಿನದ ಇಸ್ರೋ ವಿಜ್ಞಾನಿಗಳ ತಪಸ್ಸಿಗೆ ಪ್ರಥಮ ಫಲದೀಕ್ಷೆ ಇಂದು
0.567 ಕೆಜಿ ಇಂಧನ ವ್ಯಯ
2.30 (ಮಧ್ಯಾಹ್ನ)ಕ್ಕೆ 3.968 ಸೆಕೆಂಟ್ಗಳ ಅವಧಿಯ ಪರೀಕ್ಷೆ
180 ಕೆಜಿ ಇಂಧನ ಸಂಗ್ರಹ ನೌಕೆಯಲ್ಲಿದೆ
22 ನ್ಯೂಟನ್ ಶಕ್ತಿಯ 8 ಸಣ್ಣ ಎಂಜಿನ್ಗಳು ಪ್ಲಾನ್ ಬಿಯಲ್ಲಿ


ಬೆಂಗಳೂರು: ಭಾರತೀಯ ವಿಜ್ಞಾನ ಲೋಕದ ಅವಿಸ್ಮರಣೀಯ ದಿನವಿದು. ವಿಜ್ಞಾನ ಲೋಕದಲ್ಲಿ ಭಾರತದ ಇಸ್ರೋ ಹೆಸರು ಮತ್ತಷ್ಟು ಗಟ್ಟಿಯಾಗುತ್ತದೆ. ಹಾವಾಡಿಗರ ದೇಶವೆಂದು ಹೀಯಾಳಿಸಿದವರು ಮಾಡಲಾಗದ್ದನ್ನು ನಮ್ಮ ಹೆಮ್ಮೆಯ ವಿಜ್ಞಾನಿಗಳು ಸಾಕಾರಗೊಳಿಸುವ ಕ್ಷಣವಿದು. ಸುಮಾರು 307 ದಿನದಿಂದ ಇಸ್ರೋ ವಿಜ್ಞಾನಿಗಳು ನಡೆಸುತ್ತಿರುವ ತಪಸ್ಸಿಗೆ ಪ್ರಥಮ ನಗೆ ಬೀರುವ ಕ್ಷಣವದು.

ಪಿಎಸ್ಎಲ್ವಿಯಿಂದ 2013ರ ನ.5ರಂದು ಹಾರಿಬಿಟ್ಟ ಅಂತರಿಕ್ಷ ನೌಕೆಯ ಸತ್ವಪರೀಕ್ಷೆಯ ದಿನವಿದು. ನೌಕೆಯ ಮುಖ್ಯ ಎಂಜಿನ್ ಲ್ಯಾಮ್ ಅನ್ನು ಮಧ್ಯಾಹ್ನ 2.30ಕ್ಕೆ ಪರೀಕ್ಷಾರ್ಥವಾಗಿ ಹೊತ್ತಿಸಲಾಗುತ್ತದೆ. 10 ತಿಂಗಳಿಂದ ವಿಶ್ರಾಂತ ಸ್ಥಿತಿಯಲ್ಲಿರುವ ಈ ಲ್ಯಾಮ್ ಕಾರ್ಯನಿರ್ವಹಿಸುವುದೋ ಇಲ್ಲವೋ ಎಂಬ ಸಣ್ಣದೊಂದು ಅಳುಕು ವಿಜ್ಞಾನಿಗಳಿಗಿದೆ. ಬರೊಬ್ಬರಿ 440 ನ್ಯೂಟನ್ ಶಕ್ತಿ ಹೊಂದಿರುವ ಈ ಎಂಜಿನ್ ಅನ್ನು ಸರಿಯಾಗಿ ಮಧ್ಯಾಹ್ನ 2.30ಕ್ಕೆ 3.968 ಸೆಕೆಂಡ್ಗಳ ಕಾಲ ಉರಿಸಲಾಗುತ್ತದೆ. ಇದಕ್ಕಾಗಿ 0.567 ಕೆಜಿ ಇಂಧನ ವ್ಯಯವಾಗುತ್ತದೆ. ಅಂದ ಹಾಗೆ ನೌಕೆಯಲ್ಲಿ ಸುಮಾರು 180 ಕೆಜಿ ಇಂಧನವಿದೆ.

ಸೆ.24ರ ಐತಿಹಾಸಿಕ ಕ್ಷಣಕ್ಕೆ ಸೋಮವಾರ ನಡೆಯುವ 4ಸೆಕೆಂಡ್ಗೂ ಕಡಿಮೆ ಅವಧಿಯ ಪರೀಕ್ಷೆ ಬುನಾದಿ ಹಾಕಲಿದೆ. ಈ ಪರೀಕ್ಷೆಯಲ್ಲಿ ಯಶಸ್ವಿಯಾದರೆ ಸೆ.24ರ ಬಹುತೇಕ ತಲೆನೋವುಗಳು ಕಡಿಮೆಯಾದಂತೆ. ಮಂಗಳಯಾನದ ಆ ಕ್ಷಣಗಳು ಇಸ್ರೋ ಪಾಲಿಗೆ ಸಿಹಿಯಾಗುತ್ತದೆ. ಒಂದೊಮ್ಮೆ ಈ ಲ್ಯಾಮ್ ಸೋಮವಾರ ಮಧ್ಯಾಹ್ನ ಕಾರ್ಯನಿರ್ವಹಿಸದಿದ್ದರೆ, ಅದರ ಸುತ್ತಲಿರುವ 8 ಸಣ್ಣ ಎಂಜಿನ್ಗಳನ್ನು ಉರಿಸಲಾಗುತ್ತದೆ. ಇದನ್ನು ಇಸ್ರೋ ವಿಜ್ಞಾನಿಗಳು ಪ್ಲಾನ್ ಬಿ ಎಂದಿರಿಸಿಕೊಂಡಿದ್ದಾರೆ.

ಈಗಾಗಲೇ ಸೋಮವಾರ ನಡೆಯಬೇಕಿರುವ ಆ 3.968 ಸೆಕೆಂಡ್ಗಳ ಪರೀಕ್ಷೆಗೆ ಬೆಂಗಳೂರಿನ ಪೀಣ್ಯ ಮತ್ತು ಬ್ಯಾಲಾಳು ಇಸ್ರೋ ಕೇಂದ್ರಗಳಿಂದ ಎಲ್ಲ ಸಂದೇಶಗಳನ್ನು ಕಳುಹಿಸಲಾಗಿದೆ. ಸೆ.17ರಂದು ನೌಕೆಗೆ ಕಮಾಂಡ್ಗಳನ್ನು ಅಪ್ಲಿಂಕ್ ಮಾಡಲಾಗಿದೆ. ಸೆ.19ರಂದು ಎಲ್ಲ ಕಮಾಂಡ್ಗಳಿಗೆ ನೌಕೆ ಸಮರ್ಪಕವಾಗಿ ಉತ್ತರಿಸಿದೆ. ಇದಲ್ಲದೇ ಪ್ಲಾನ್ ಬಿನಲ್ಲಿ ಉಳಿದ 8 ಸಣ್ಣ ಎಂಜಿನ್ಗಳನ್ನು ಉರಿಸಲು ಕೂಡ ಈಗಾಗಲೇ ಕಮಾಂಡ್ ಕಳುಹಿಸಲಾಗಿದೆ. ಪ್ರತಿ ಎಂಜಿನ್ 22 ನ್ಯೂಟನ್ ಶಕ್ತಿ ಉತ್ಪಾದಿಸುತ್ತದೆ.

ಒಂದೊಮ್ಮೆ ಲ್ಯಾಮ್ ಕೆಲಸ ಮಾಡದಿದ್ದರೆ 8 ಸಣ್ಣ ಎಂಜಿನ್ಗಳನ್ನು ದೀರ್ಘ ಅವಧಿಗೆ ಹೊತ್ತಿಸಬೇಕಾಗುತ್ತದೆ. ಇದರಿಂದ ಮಂಗಳದಲ್ಲಿನ ಕಕ್ಷೆ ಬದಲಾಗುವ ಸಾಧ್ಯತೆ ಇದೆ. ಹಾಗೆಯೇ ಸಂಶೋಧನೆಯ ದಿಕ್ಕು ಕೂಡ ಬದಲಾಗಬಹುದು.

ಲ್ಯಾಮ್ ಹೊತ್ತಿ ಉರಿಯುತ್ತದೆ ಎಂಬ ವಿಶ್ವಾಸವಿದೆ. ಏನಾದರೂ ನಮ್ಮ ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗುತ್ತೇವೆ. ಭಾರತದ ಬಾಹ್ಯಾಕಾಶ ಸಂಶೋಧನೆಯ ಮೈಲಿಗಲ್ಲಾಗಲಿದೆ.
-ಡಾ.ಕೋಟೇಶ್ವರ ರಾವ್,
ಇಸ್ರೋ ವಿಜ್ಞಾನ ವಿಭಾಗದ ಕಾರ್ಯದರ್ಶಿ

ಇಂದು ಕಕ್ಷೆಗೆ ಮ್ಯಾವೆನ್

ಅಮೆರಿಕದ ಪ್ರತಿಷ್ಟಿತ ನಾಸಾ ಸಂಸ್ಥೆಯ ಬಹು ನಿರೀಕ್ಷಿತ ಮ್ಯಾವೆನ್ ಅಂತರಿಕ್ಷ ನೌಕೆಯು ಮಂಗಳ ಗ್ರಹದ ಕಕ್ಷೆಗೆ ಸೋಮವಾರ ಸೇರಲಿದೆ. ಸುಮಾರು 44.20 ಕೋಟಿ ಕಿ.ಮೀ ದೂರ ಕ್ರಮಿಸಿ ಈಗ ಮಂಗಳ ಗ್ರಹದ ಕಕ್ಷೆಗೆ ಹೋಗುತ್ತಿದೆ. ಭಾರತದ ಮಂಗಳಯಾನಕ್ಕಿಂತ 13 ದಿನ ತಡವಾಗಿ ಮ್ಯಾವೆನ್ ಯಾನ ಆರಂಭಿಸಿತ್ತು. ಸುಮಾರು 485 ಮಿಲಿಯನ್ ಯುಎಸ್ ಡಾಲರ್ (2. 958 ಕೋಟಿ ರು.)ಹಣವನ್ನು ಇದಕ್ಕೆ ವ್ಯಯ ಮಾಡಲಾಗಿದೆ.

ಭಾರತ ಸರ್ಕಾರ ಖರ್ಚು ಮಾಡಿರುವ ಆರು ಪಟ್ಟು ಹಣವನ್ನು ಈ ಯೋಜನೆಗೆ ವ್ಯಯಿಸಲಾಗಿದೆ. ಇದೇ ಕಾರಣದಿಂದ 13 ದಿನ ತಡವಾಗಿ ಉಡಾವಣೆಯಾಗಿದ್ದರೂ 2 ದಿನ ಮೊದಲೇ ಕಕ್ಷೆ ಸೇರುತ್ತಿದೆ. ಹಾಗೇಯೇ ಸುಮಾರು 1 ವಷಂ ಕಾಲ ಮಂಗಳ ಗ್ರಹದ ಬಗ್ಗೆ ಸಂಶೋಧನೆ ನಡೆಸಲಿದೆ. ಸೋಮವಾರ ಬೆಳಗ್ಗೆ 7.30ಕ್ಕೆ 33 ನಿಮಿಷಗಳ ಲ್ಯಾಮ್ ಅನ್ನು ಉರಿಸಿ ಮಂಗಳ ಕಕ್ಷೆಗೆ ಸೇರಿಸಲಾಗುತ್ತಿದೆ. ಮೊದಲ ಪರೀಕ್ಷೆಯಲ್ಲಿ ಲ್ಯಾಮ್ ಕಾರ್ಯನಿರ್ವಹಿಸುತ್ತಿರುವುದು ಖಾತ್ರಿಯಾಗಿದ್ದು, ನಾಸಾದ ಈ ಮಂಗಳಯಾನ ಬಾಹ್ಯಾಕಾಶ ವಿಜ್ಞಾನದಲ್ಲಿ ಹೊಸ ಭಾಷ್ಯ ಬರೆಯಲಿದೆ ಎಂದು ಹೇಳಲಾಗುತ್ತಿದೆ. ಮಂಗಳ ಗ್ರಹದಲ್ಲಿರಬಹುದಾದ ಅದಿರು, ನೀರು ಹಾಗೂ ಇತರ ಅನಿಲಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತದೆ. ಮಿಲಿಯನ್ ಗಟ್ಟಲೇ ವರ್ಷಗಳ ಹಿಂದೆ ಮಂಗಳದಲ್ಲಿ ನೀರಿತ್ತು ಎಂಬ ಜಿಜ್ಞಾಸೆಗಳಿವೆ.

ಭಾರತ ಮಂಗಳಯಾನ ಯಶಸ್ವಿಯಾದ ಬಳಿಕ ನಾಸಾ ಹಾಗೂ ಇಸ್ರೋ ಜಂಟಿಯಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲಿಯೇ ಈ ಸಂಬಂಧ ಅಂತಿಮ ನಿರ್ಣಯ ಹೊರಬೀಳುವ ಸಾಧ್ಯತೆ ಇದೆ.

ಆರಂಭಿಕ ದಿನಗಳಲ್ಲಿ ಭೂಮಿ ಹಾಗೂ ಮಂಗಳ ಗ್ರಹದ ನಡುವಿನ ನಿಖರ ಅಂತರವನ್ನು ಲೆಕ್ಕ ಮಾಡಲು ಸಾಧ್ಯವಾಗಿರಲಿಲ್ಲ. ತಂತ್ರಜ್ಞಾನ ಹಾಗೂ ಗಣಿತದ ಜ್ಞಾನವಿಲ್ಲದ ಪರಿಣಾಮ ನೌಕೆಗಳಿಗೆ ಕಮಾಂಡಿಗ್ ಕೊಡುವುದೇ ಅಸಾಧ್ಯವಾಗಿತ್ತು. ಆದರೆ ಇಂದು ಭಾರತದ ವಿಜ್ಞಾನಿಗಳ ಹತ್ತಿರವೂ ನಿಖರ ಲೆಕ್ಕ ಹಾಗೂ ತಂತ್ರಜ್ಞಾನವಿದೆ.
-ಎಚ್.ಭೋಜರಾಜ್
ಇಸ್ರೋವಿಜ್ಞಾನಿ


ಮೊದಲು ನೌಕೆಗಳ ಕಮಾಂಡಿಂಗ್ ಸೇರಿದಂತೆ ಬಾಹ್ಯಾಕಾಶ ತಂತ್ರಜ್ಞಾನಗಳು ಕೇವಲ ನಾಸಾ ಹಾಗೂ ರಷ್ಯಾ ವಿಜ್ಞಾನಿಗಳ ಜತೆ ಮಾತ್ರವಿತ್ತು. ಆದರೆ ಕಳೆದ 2 ದಶಕಗಳಿಂದ ಭಾರತದ ವಿಜ್ಞಾನಿಗಳು ಹಾಗೂ ಇಸ್ರೋದ ನಿರಂತರ ಸಂಶೋಧನೆಗಳಿಂದ ಈ ತಂತ್ರಜ್ಞಾನ ನಮಗೂ ಲಭ್ಯವಾಗುವಂತಾಗಿದೆ. ಈ ಕಾರಣದಿಂದ ಭೂಮಿಯಿಂದ ಎಷ್ಟು ದೂರದಲ್ಲಿ ಮಂಗಳವಿದೆ. ಎಷ್ಟು ಮಿಲಿಯನ್ ಕಿ.ಮೀ ದೂರವನ್ನು ನೌಕೆ ಪ್ರಯಾಣಿಸಬೇಕು ಹಾಗೂ ಎಷ್ಟು ಸಮಯದಲ್ಲಿ ಅಲ್ಲಿಂದ ಸಂದೇಶಗಳು ಬರುತ್ತವೆ ಎಂಬ ಕುರಿತಂತೆ ಬೆರಳ ತುದಿಯಲ್ಲಿ ಮಾಹಿತಿಗಳಿವೆ.
-ಡಾ.ಪಿ.ಶ್ರೀಕುಮಾರ್,
ಇಂಡಿಯನ್ ಇನ್ಸ್ ಟಿ ಟ್ಯೂಟ್ ಆಫ್ ಆಸ್ಟ್ರೋ ಫಿಸಿಕ್ಸ್ ಸಂಸ್ಥೆಯ ನಿರ್ದೇಶಕ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.