

ಬೆಂಗಳೂರು: ಬಹಿರಂಗ ಪ್ರಚಾರ ಅಂತ್ಯಗೊಂಡರೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಕಾಂಗ್ರೆಸ್ ಪರ ಮತಯಾಚನೆ ಮಾಡದೇ ಇರುವುದು ಪಕ್ಷದ ವಲಯದಲ್ಲಿ ಅನೇಕ ಚರ್ಚೆಗೆ ಕಾರಣವಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ವಯೋ ಸಹಜ ಸಮಸ್ಯೆಗಳ ಹೊರತಾಗಿಯೂ ಕಾಂಗ್ರೆಸ್ ಪರವಾಗಿ ದಕ್ಷಿಣ ಕರ್ನಾಟಕ ಭಾಗದಲ್ಲಿ ಕೃಷ್ಣ ಪ್ರಚಾರ ನಡೆಸಿದ್ದರು. ಆದರೆ, ಬಿಬಿಎಂಪಿ ಚುನಾವಣೆಗೆ ಮಾತ್ರ ಒಂದೇ ಒಂದು ಕಡೆಯೂ ಪ್ರಚಾರ ಸಭೆ ಮತ್ತು ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಈ ಬಗ್ಗೆ ಪಕ್ಷದ ವಲಯದಲ್ಲಿ ಈಗಾಗಲೇ ಚರ್ಚೆ ಪ್ರಾರಂಭವಾಗಿದೆ.
ರಾಜ್ಯ ಕಾಂಗ್ರೆಸ್ ಉಸ್ತು ವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸುದ್ದಿಗಾರರು ಈ ಬಗ್ಗೆ ಪ್ರಶ್ನಿಸಿದ್ದರೂ ಯಾರೂ ಉತ್ತರ ನೀಡಿಲ್ಲ. ಹೀಗಾಗಿ ಪಕ್ಷದ ವಲಯದಲ್ಲಿ ಇದು ಸೂಕ್ಷ್ಮ ಸಂಗತಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಲ ಸಚಿವರೂ ಕಾಣುತ್ತಿಲ್ಲ: ಕೃಷ್ಣ ಅನುಪಸ್ಥಿತಿ ಜತೆಗೆ ಕೆಲ ಉಸ್ತುವಾರಿ ಸಚಿವರೂ ಬಿಬಿಎಂಪಿ ಚುನಾವಣೆ ಪ್ರಚಾರದಲ್ಲಿ ಸಕ್ರಿಯರಾಗಿ ಕಾಣುತ್ತಿಲ್ಲ. ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗವನ್ನು ಪ್ರತಿನಿಧಿಸುವ ಸಚಿವ ರಿಗೆ ಬಿಬಿಎಂಪಿ ಚುನಾವಣೆ ಉಸ್ತು ವಾರಿ ಮತ್ತು ನಿರ್ವಹಣೆಯಲ್ಲಿ ಉತ್ಸಾಹವೇ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.