

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಸಿಕ್ಕಿರುವ ಜಾಮೀನಿಗೆ ಸಂತಸಪಟ್ಟು ಸಂಭ್ರಮಿಸಿರುವ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬಿಜೆಪಿ ಪಕ್ಷ ಇದು "ಭ್ರಷ್ಟಾಚಾರದ ಸಂಭ್ರಮ" ಎಂದಿರುವುದಲ್ಲದೆ ಕಾಂಗ್ರೆಸ್ ನಾಯಕರಿಗೆ ಸಿಕ್ಕಿದ್ದು ಜಾಮೀನು ಮಾತ್ರ ಭಾರತ ರತ್ನವಲ್ಲ ಎಂದು ಕುಹಕವಾಡಿದೆ.
"ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಗೆದ್ದಿದೆ. ಸಾಮಾನ್ಯ ಮನುಷ್ಯರ ಮತ್ತು ರಾಜಕೀಯದಲ್ಲಿ ಪ್ರಮುಖರ ನಡುವೆ ಅದು ಬೇಧವೆಣಿಸುವುದಿಲ್ಲ. ಅದಕ್ಕಾಗಿಯೇ ಕೊನೆಗೆ ಅವರು ಕೂಡ ನ್ಯಾಯಾಲಯದ ಮುಂದೆ ಹಾಜರಾಗಬೇಕಾಯಿತು.
"ಆದುದರಿಂದ ಕಾಂಗ್ರೆಸ್ ಪಕ್ಷ ಈ ಸಂಭ್ರಮವನ್ನು "ಭ್ರಷ್ಟಾಚಾರದ ಸಂಭ್ರಮ" ಎಂದು ಕರೆಯುವಂತೆ ಮಾಡಿದೆ. ಇದು ಅವರಿಗೆ ಸಿಕ್ಕ ಜಾಮೀನು ಮಾತ್ರ ಭಾರತ ರತ್ನವಲ್ಲ ಎಂದು ಅವರಿಗೆ ನಾವು ನೆನಪಿಸಬೇಕಿದೆ" ಎಂದು ಬಿಜೆಪಿ ಪಕ್ಷದ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಈ ಸಂಭ್ರಮ ಆ ಪಕ್ಷದ ಚಾರಿತ್ರ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ ಎಂದು ಕೂಡ ಸಂಬಿತ್ ಹೇಳಿದ್ದಾರೆ. ರಾಹುಲ್ ಮತ್ತು ಸೋನಿಯಾ ಅವರಿಗೆ ಜಾಮೀನು ದೊರೆತ ನಂತರ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಸಂಭ್ರಮಾಚರಣೆಗಳನ್ನು ನಡೆಸಿದ್ದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.