

ಮೀರತ್: ಮಹಾತ್ಮ ಗಾಂಧಿಯವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಗೆ ದೇವಾಲಾಯ ಕಟ್ಟುವ ಹಿಂದೂ ಮಹಾಸಭಾ ಯೋಜನೆಯನ್ನು ಪ್ರತಿಭಟಿಸಲು ಮೀರತ್ ನ ರೋಹತ್ ಗ್ರಾಮದಲ್ಲಿ ಪ್ರತಿಭಟನಾ ರ್ಯಾಲಿ ನಡೆದಿದೆ. ಸುಮಾರು ಇಪ್ಪತ್ತು ಹಳ್ಳಿಗಳಿಂದ ಬಂದಿದ್ದ ಸಾವಿರಾರು ಗ್ರಾಮಸ್ಥರು, ತಮ್ಮ ಪ್ರದೇಶದಲ್ಲಿ ಗೋಡ್ಸೆಗೆ ದೇವಾಲಯ ನಿರ್ಮಿಸಲು ಅನುಮತಿ ನೀಡುವುದಿಲ್ಲ ಎಂದಿದ್ದಾರೆ.
ಉತ್ತರ ಪ್ರದೇಶದ ನವನಿರ್ಮಾಣ ಸೇನೆ ಆಯೋಜಿಸಿದ್ದ 'ಜನಸಂವಾದ' ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ಹಿಂದೂ ಮಹಾಸಭ ಕಟ್ಟಲು ಯೋಜಿಸಿರುವ ಈ ದೇವಾಲಯಕ್ಕೆ ಅನುಮತಿ ನೀಡದಂತೆ ಆಗ್ರಹಿಸಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಅರ್ಜಿ ನೀಡಲಿದ್ದೇವೆ ಎಂದಿದ್ದಾರೆ. ಹಾಗೆಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ವಿಷಯದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಗೋಡ್ಸೆ ದೇವಾಲಯ, ಪ್ರಧಾನಿ ಮೌನವಾಗಿರುವುದೇಕೆ?: ಕಾಂಗ್ರೆಸ್
ಹಿಂದೂ ಮಹಾಸಭಾ ಗೋಡ್ಸೆ ದೇವಾಲಯವನ್ನು ನಿರ್ಮಿಸುವ ಯೋಜನೆಯ ಬಗ್ಗೆ ಪ್ರತಿಕ್ರಿಯೆ ನೀಡದ ಪ್ರಧಾನಿ ಮೋದಿ ಅವರನ್ನು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ. ಗಾಂಧಿಯವರನ್ನು ಬಿಯರ್ ಬಾಟಲಿಯ ಮೇಲೆ ಚಿತ್ರಿಸಿದ್ದಕ್ಕೆ ವಿರೋಧಿಸುವ ನಾವು, ಗಾಂಧಿಯನ್ನು ಕೊಂದ ಕೊಲೆಪಾತಕಿಯನ್ನು ಆರಾಧಿಸುವಾಗ ಯಾಕೆ ಅದರ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಈ ವಿಷಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೌನವಾಗಿರುವುದೇಕೆ? ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.