

ಆರ್ಥಿಕ ನೀತಿ ಮತ್ತು ಯೋಜನೆಗಳನ್ನು ಸಿದ್ಧಪಡಿಸುವುದರಲ್ಲಿ ಅರ್ಥಶಾಸ್ತ್ರಜ್ಞ ಮತ್ತು ಆರ್ ಬಿ ಐ ಗವರ್ನರ್ ರಘುರಾಮ್ ರಾಜನ್ ನಿಪುಣ. ದೇಶದ ಮತ್ತು ವಿಶ್ವ ಆರ್ಥಿಕತೆಯ ಬಗ್ಗೆಯೂ ತಮ್ಮ ಹೇಳಿಕೆಗಳಿಂದ ಆಗಾಗ ಎಚ್ಚರಿಕೆಯನ್ನೂ ನೀಡುತ್ತಿರುತ್ತಾರೆ. ಆದರೆ 8ನೇ ತರಗತಿಯ ಬಾಲಕನೊಬ್ಬ ಕೇಳಿದ ಪ್ರಶ್ನೆಯೊಂದು ಆರ್ ಬಿ ಐ ಗವರ್ನರ್ ಅವರನ್ನೇ ತಬ್ಬಿಬ್ಬು ಮಾಡಿದ ವಿಡಿಯೋ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ವೈರಲ್ ಆಗಿದೆ.
ಮುಂಬೈ ನಲ್ಲಿ ವಿದ್ಯಾರ್ಥಿಗಳ ಸಮೂಹವನ್ನು ಉದ್ದೇಶಿಸಿ ರಾಜನ್ ಮಾತನಾಡುವಾಗ, ೮ನೆ ತರಗತಿಯ ರಜಸ್ "ರುಪಾಯಿ ಮೌಲ್ಯದಲ್ಲಾಗುವ ವ್ಯತ್ಯಾಸದಿಂದ ವಿಶ್ವದ ಆರ್ಥಿಕ ವ್ಯವಸ್ಥೆ ಏರುಪೇರಾಗುವ ದಿನ ಯಾವಾಗ ಬರುತ್ತದೆ" ಎಂಬ ಪ್ರಶ್ನೆ ಕೇಳಿದ್ದಾನೆ.
ಅಮೆರಿಕಾದಲ್ಲಿ ನಡೆಯುವ ಒಂದು ಸಣ್ಣ ಘಟನೆಯಿಂದ ಇಲ್ಲಿ ರುಪಾಯಿ ಮೌಲ್ಯ ಕುಸಿಯುವುದನ್ನು ನಾವು ನೋಡಿದ್ದೇವೆ ಆದರೆ "ಆದರೆ ಭಾರತದ ಆರ್ಥಿಕ ನೀತಿಗಳಿಂದ ಇತರ ದೇಶಗಳಿಗೆ ಬಿಸಿ ತಟ್ಟುವ ದಿನಗಳನ್ನು ನಾವು ಯಾವಾಗ ನೋಡುವುದು? " ಎಂದಿದ್ದಾನೆ.
ಈ ಪ್ರಶ್ನೆಯನ್ನು ಮನಸಾರೆ ಪ್ರಶಂಸಿಸಿದ ರಘುರಾಮ್ ರಾಜನ್, ರಜಸ್ ಬೆಳೆದು ದೊಡ್ಡವನಾಗುವುದರೊಳಗೆ ಆರ್ ಬಿ ಐ ಗವರ್ನರ್ ವಿಶ್ವದ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡೇ ನೀತಿಗಳನ್ನು ರಚಿಸಬೇಕಾಗುತ್ತದೆ ಮತ್ತು ಆ ಸಮಯಕ್ಕೆ ರುಪಾಯಿಯ ಮೌಲ್ಯ ಶಕ್ತಿಯುತವಾಗಿ ಬೆಳೆದಿರುತ್ತದೆ ಎಂದಿದ್ದಾರೆ.
ನಮ್ಮ ದೇಶದ ನೀತಿಗಳು ಇತರ ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದರೆ ಅದರಿಂದ ನಮಗೆ ಸಂತಸವಾಗುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ವಿಶ್ವದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದರಿಂದ ಅಮೇರಿಕಾ ತನ್ನ ನೀತಿಗಳನ್ನು ರಚಿಸುವಾಗ ಸೂಕ್ಷವಾಗಿರಬೇಕು ಎಂದು ಕೂಡ ರಾಜನ್ ತಿಳಿಸಿದ್ದಾರೆ.
ರಜಸ್ ಕಾಲಕ್ಕೆ ಭಾರತ ವಿಶ್ವದ 2-3 ಅತಿ ದೊಡ್ಡ ಆರ್ಥಿಕ ದೇಶಗಳಲ್ಲಿ ಒಂದಾಗಿರುತ್ತದೆ ಎಂದು ಕೂಡ ರಾಜನ್ ತಿಳಿಸಿದ್ದಾರೆ.