

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದೆ. ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಕಬ್ಬು ಬೆಳೆಗಾರ ಮಹೇಂದ್ರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
45 ವರ್ಷದ ಮಹೇಂದ್ರ ಒಂದೂವರೆ ಎಕರೆಯಲ್ಲಿ ಕಬ್ಬಿನ ಬೆಳೆ ಬೆಳೆದಿದ್ರು. ಇದಕ್ಕಾಗಿ ರು.3 ಲಕ್ಷ ಕೈಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಸಾಧ್ಯವಾಗದೇ ಕಬ್ಬಿನ ಗದ್ದೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಡ್ಯದಲ್ಲಿ ಈವರೆಗೆ 21 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೋಲಾರದಲ್ಲಿ ಮತ್ತೊಬ್ಬ ರೈತನ ಸಾವು
ಸಾಲದ ಬಾಧೆಗೆ ಬೇಸತ್ತು ಕೋಲಾರ ಜಿಲ್ಲೆಯ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶ್ರೀನಿವಾಸಪುರ ತಾಲೂಕಿನ ಚಿಂತಪಲ್ಲಿ ಗ್ರಾಮದಲ್ಲಿ 37 ವರ್ಷದ ಸುರೇಶ್ ಎಂಬ ರೈತ ಜಮೀನಿನಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
3 ಎಕರೆ ಜಮೀನು ಹೊಂದಿದ್ದ ಸುರೇಶ್ ಕೊಳವಿ ಬಾವಿ ಕೊರೆಸಲು 4 ಲಕ್ಷ ಕೈ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.