ಪಾಸ್ ಪೋರ್ಟ್ ವಶಪಡಿಸಿಕೊಳ್ಳುವ ಅಧಿಕಾರ ಪೊಲೀಸರಿಗಿಲ್ಲ: ಹೈ ಆದೇಶ

ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದರೂ ಇನ್ನು ವಿದೇಶಕ್ಕೆ ಹೋಗುವುದು ಸುಲಭ. ಕಾರಣ, ಪೊಲೀಸರಿಗೆ ಪಾಸ್ ಪೋರ್ಟ್ ವಶಪಡಿಸಿಕೊಳ್ಳುವ ಅಧಿಕಾರ ಇಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಕರ್ನಾಟಕ ಹೈಕೋರ್ಟ್ ಮತ್ತು ಪಾಸ್ ಪೋರ್ಟ್
ಕರ್ನಾಟಕ ಹೈಕೋರ್ಟ್ ಮತ್ತು ಪಾಸ್ ಪೋರ್ಟ್
Updated on: 
ಬೆಂಗಳೂರು: ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದರೂ ಇನ್ನು ವಿದೇಶಕ್ಕೆ ಹೋಗುವುದು ಸುಲಭ. ಕಾರಣ, ಪೊಲೀಸರಿಗೆ ಪಾಸ್ ಪೋರ್ಟ್ ವಶಪಡಿಸಿಕೊಳ್ಳುವ ಅಧಿಕಾರ ಇಲ್ಲ ಎಂದು ಹೈಕೋರ್ಟ್  ಆದೇಶಿಸಿದೆ.
ವಿದೇಶದಲ್ಲಿ ಉದ್ಯೋಗ ಅರಸಿದ್ದ ಉಡುಪಿ ತಾಲೂಕಿನ ಮೊಹಮ್ಮದ್ ತನ್ಸೀಮ್ ವಿರುದ್ಧ ಭಾರತೀಯ ದಂಡ ಸಂಹಿತೆ 468 ಉದ್ದೇಶಪೂರ್ವಕವಾಗಿ ಫೋರ್ಜರಿ, 406 ವಿಶ್ವಾಸದ್ರೋಹ ಮತ್ತು  420 ಅಡಿ ವಂಚನೆ ಪ್ರಕರಣ ದಾಖಲಾಗಿತ್ತು. ಈ ಕಾರಣಕ್ಕಾಗಿ ಆತನ ಪಾಸ್ ಪೋರ್ಟ್ ಅನ್ನು ಉಡುಪಿ ಪೊಲೀ ಸರು ವಶಪಡಿಸಿಕೊಂಡಿದ್ದರು. ಕಾನೂನು ಬಾಹಿರವಾಗಿ ಪಾಸ್‍ ಪೋರ್ಟ್  ವಶಪಡಿಸಿ ಕೊಂಡಿದ್ದು, ಅದನ್ನು ಹಿಂದಿರುಗಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವಿಶ್ವಜಿತ್ ಶೆಟ್ಟಿ ವಾದ ಮಂಡಿಸಿ, ತಮ್ಮ ಕಕ್ಷಿದಾರರ  ಪಾಸ್ ಪೋರ್ಟ್ ಅನ್ನು ಪೊಲೀಸ್ ಇಲಾಖೆ ವಶಪಡಿಸಿಕೊಂಡಿರುವುದು ಕಾನೂನುಬಾಹಿರ.
ಅಪರಾಧ ಕೃತ್ಯಗಳಲ್ಲಿ ಪೊಲೀಸರು ವಶಪಡಿಸಿಕೊಳ್ಳಬಹುದಾದ ವಸ್ತುಗಳ ವ್ಯಾಪ್ತಿಯಲ್ಲಿ ಪಾಸ್‍ ಪೋರ್ಟ್ ಒಳಪಟ್ಟಿಲ್ಲ. ವಾಸ್ತವವಾಗಿ ಕಾನೂನಿನ ಪ್ರಕಾರ ಪೊಲೀಸ್ ಇಲಾಖೆಗೆ ಪಾಸ್‍ಪೊರ್ಟ್  ಜಪ್ತಿ ಮಾಡಿಕೊಳ್ಳಬಹುದೇ ಹೊರತು ವಶಪಡಿಸಿಕೊಳ್ಳುವ ಅಧಿಕಾರವಿಲ್ಲ. ಪಾಸ್‍ಪೋರ್ಟ್ ನೀಡುವ ಅಧಿಕಾರ ಇದ್ದವರಿಗೆ ಮಾತ್ರ ಅದನ್ನು ವಶಪಡಿಸಿಕೊಳ್ಳುವ ಅಧಿಕಾರವಿದೆ ಎಂದು  ವಾದಿಸಿದರು. ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಅಭಿಯೋಜಕ ಬಿ. ವಿಶ್ವೇಶ್ವರಯ್ಯ, ಈ ಕುರಿತು ಅರ್ಜಿದಾರರು ಈ ಹಿಂದೆ ಅಧೀನ ನ್ಯಾಯಾಲಯದಲ್ಲಿ ಪಾಸ್‍ಪೋರ್ಟ್ ಹಿಂದಿರುಗಿಸುವಂತೆ ಕೋರಿ ಅರ್ಜಿ ದಾಖಲಿಸಿದ್ದರು. ಅಲ್ಲದೇ ಅರ್ಜಿದಾರರು ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದು, ಈ ವೇಳೆ ಅವರಿಗೆ ಪಾಸ್ ಪೋರ್ಟ್ ನೀಡಿದ್ದೇ ಆದಲ್ಲಿ ಅವರು ದೇಶ ಬಿಟ್ಟು ಪಲಾಯನ ಮಾಡುವ  ಸಂಭವವಿದೆ.
ಇದರಿಂದ ತನಿಖೆ ವಿಳಂಬವಾಗುವ ಸಾಧ್ಯತೆ ಇದ್ದು, ಶೀಘ್ರ ಪ್ರಕರಣದ ತನಿಖೆ ಪೂರ್ಣಗೊಳಿಸುವುದಾಗಿ ವಾದಿಸಿದರು. ವಾದ ವಿವಾದ ಆಲಿಸಿದ ನ್ಯಾ. ಎ.ಎನ್.ವೇಣುಗೋಪಾಲ್‍ಗೌಡ ಅವರಿದ್ದ  ಏಕಸದಸ್ಯ ಪೀಠ, ಸುರೇಶ್ ನಂದಾ ಪ್ರಕರಣದಲ್ಲಿ ಪಾಸ್ ಪೊೀರ್ಟ್ ವಶಪಡಿಸಿಕೊಳ್ಳಲು ಪಾಸ್‍ಪೋರ್ಟ್ ಇಲಾಖೆಗೆ ಮಾತ್ರ ಅಧಿಕಾರವಿದೆ. ಸಿಆರ್‍ಪಿಸಿ ಅಡಿಯಲ್ಲಿ ಪೊಲೀಸ್ ಅಧಿಕಾರಿಗಳಿಗೆ   ಕಳ್ಳತನ ಮಾಡಿದ ಮಾಲು ಮತ್ತು ಅನುಮಾನಾಸ್ಪದ ವಸ್ತು ಕಂಡುಬಂದರೆ ಮಾತ್ರ ವಶಪಡಿಸಿಕೊಳ್ಳಲು ಅಧಿಕಾರವಿದೆಂಯೇ ಹೊರೆತು ಪಾಸ್‍ಪೋರ್ಟ್ ಅಲ್ಲ. ಅಲ್ಲದೇ ಇದನ್ನು  ವಶಪಡಿಸಿಕೊಳ್ಳುವುದು ಪಾಸ್‍ಪೋರ್ಟ್ ಕಾಯ್ದೆಯ ಸೆಕ್ಷನ್ 10(3)ರ ವ್ಯಾಪ್ತಿಗೆ ಬರುತ್ತದೆ. ಪಾಸ್‍ಪೋರ್ಟ್ ಕಾಂಯ್ದೆ ಎಂಬುದು ವಿಶೇಷ ಕಾನೂನಾಗಿದ್ದು ಅದು ಸಿಆರ್‍ಪಿಸಿ ವ್ಯಾಪ್ತಿಯಲ್ಲಿ ಬರುವುದಿಲ್ಲ  ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ತನಿಖೆ ವೇಳೆ ಪೊಲೀಸರು ಮೌಖಿಕವಾಗಿ ಪಾಸ್ ಪೋರ್ಟ್ ವಶಪಡಿಸಿಕೊಳ್ಳಬಹುದು. ಹಾಗೆಮಾಡಿದಲ್ಲಿ ಅದನ್ನು ಪಾಸ್‍ಪೋರ್ಟ್ ಇಲಾಖೆ ವಶಕ್ಕೆ ಪೊಲೀಸರು ನೀಡಬೇಕು. ಅಗತ್ಯವೆನಿಸಿದರೆ  ಪೊಲೀಸ್ ಇಲಾಖೆ ಪಾಸ್‍ಪೋರ್ಟ್ ಇಲಾಖೆಗೆ ಮನವಿ ಸಲ್ಲಿಸಿ ಸೆಕ್ಷನ್ 10ರ ಪ್ರಕಾರ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಬೇಕೇ ವಿನಃ ತಾನೇ ಅದನ್ನು  ವಶಪಡಿಸಿಕೊಳ್ಳುವಂತಿಲ್ಲ. ಹೀಗಾಗಿ ವಾರದೊಳಗಾಗಿ ಹಿಂದಿರುಗಿಸುವಂತೆ ಆದೇಶಿಸಿದೆ.
ಮನೇಕಾ ಪ್ರಕರಣ
1978ರಲ್ಲಿ ಕೇಂದ್ರ ಸರ್ಕಾರ ಮನೇಕಾ ಗಾಂಧಿ ಅವರ ಪಾಸ್‍ಪೋರ್ಟ್ ಅನ್ನು ವಶಪಡಿಸಿಕೊಂಡ ಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಸಿದಾಗ `ಪರಿಚ್ಛೇದ 21ರ ಪ್ರಕಾರ ವ್ಯಕ್ತಿಯ ವಿದೇಶ ಪ್ರವಾಸ ಕೂಡ ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿಗೆ ಬರಲಿದೆ. ಕಾನೂನಿನಲ್ಲಿ ಅವಕಾಶ ಇದೆ ಎಂದ ಮಾತ್ರಕ್ಕೆ ವ್ಯಕ್ತಿಯ ವಿದೇಶ ಪ್ರವಾಸ ಮೊಟಕುಗೊಳಿಸುವುದು ಸರಿಯಲ್ಲ. ಈ ರೀತಿ ಮಾಡುವ ಮೂಲಕ  ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆತರುವ ಕ್ರಮ ಒಪ್ಪುವಂತದಲ್ಲ. ಯಾವುದೇ ಕ್ರಮ ಜರುಗಿಸಬೇಕಾದರೆ ಅದು ನ್ಯಾಯಸಮ್ಮತ ಮತ್ತು ಸಮಂಜಸವಾಗಿರಬೇಕು' ಎಂದು ಸುಪ್ರೀಂ  ಕೋರ್ಟ್ ತೀರ್ಪು ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com