ಗಣಿ ಅಕ್ರಮ: ರದ್ದಾದ ಲೈಸೆನ್ಸ್ ಮರುಹರಾಜಿಗೆ ಸುಪ್ರೀಂ ಅಸ್ತು

ಅಕ್ರಮ ಗಣಿಗಾರಿಕೆಯಿಂದಾಗಿ ಪರವಾನಗಿ ರದ್ದಾಗಿರುವ ಸಿ ವರ್ಗದ 15 ಕಂಪನಿಗಳ ಲೈಸೆನ್ಸ್ ಗಳ ಮರು ಹರಾಜು ಹಾಕಲು ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿದೆ...
ಕರ್ನಾಟಕದಲ್ಲಿ ಮೈನಿಂಗ್
ಕರ್ನಾಟಕದಲ್ಲಿ ಮೈನಿಂಗ್
Updated on: 

ನವದೆಹಲಿ: ಅಕ್ರಮ ಗಣಿಗಾರಿಕೆಯಿಂದಾಗಿ ಪರವಾನಗಿ ರದ್ದಾಗಿರುವ ಸಿ ವರ್ಗದ 15 ಕಂಪನಿಗಳ ಲೈಸೆನ್ಸ್ ಗಳ ಮರು ಹರಾಜು ಹಾಕಲು ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿದೆ.

ಗುರುವಾರ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠವು ಹರಾಜು ಹಾಕಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನೀಡಿದೆ. ಬುಧವಾರವಷ್ಟೇ ಸಿ ವರ್ಗದ ಕಂಪನಿಗಳ ಮರುಪರಿಶೀಲನಾ ಅರ್ಜಿಗಳನ್ನು ವಜಾ ಮಾಡಿದ್ದ ನ್ಯಾಯಪೀಠ, ಹೊಸದಾಗಿ ಹರಾಜಿಗೆ ಚಾಲನೆ ನೀಡಿತು. ಜತೆಗೆ ಇದುವರೆಗೆ ಕರ್ನಾಟಕದವರು ಮಾತ್ರ ಹರಾಜಿನಲ್ಲಿ
ಭಾಗವಹಿಸಬೇಕೆಂಬ ನಿಯಮವನ್ನು ಸಡಿಲಿಸಿದ್ದು, ಭಾರತದ ಯಾವ ಅದಿರು ಬಳಕೆದಾರರಾದರೂ ಹರಾಜಿನಲ್ಲಿ ಭಾಗವಹಿಸ ಬಹುದು ಎಂದು ಹೇಳಿದೆ.

ಪ್ರಮುಖ ಮಾರ್ಗಸೂಚಿಗಳು
-ಹರಾಜು ಪ್ರಕ್ರಿಯೆ 32 ವಾರಗಳಲ್ಲಿ ಪೂರ್ಣಗೊಳಿಸಬೇಕು
-ನ್ಯಾಯಾಲಯ ನಿಗದಿ ಮಾಡಿದ ಗಡಿವ್ಯಾಪ್ತಿಯೊಳಗಿನ ಪ್ರದೇಶವನ್ನು ಮಾತ್ರ ಹರಾಜು ಹಾಕಬೇಕು
-ಲೀಸ್ ಪಡೆದುಕೊಂಡವರು, ವಾರ್ಷಿಕ ಸಾಮರ್ಥ್ಯದ ಶೇ.50ರಷ್ಟಾದರೂ ಅದಿರನ್ನು ತೆಗೆಯಬೇಕು
-ಹರಾಜಿನಲ್ಲಿ ಅದಿರು ಬಳಕೆದಾರರು ಮಾತ್ರ ಭಾಗವಹಿಸಬೇಕು
-ಪರಿಸರ ಪುನರುಜ್ಜೀವನ ಮತ್ತು ಪರಿಸರ ಪುನಶ್ಚೇತನ ಮಾರ್ಗಸೂಚಿಯನ್ನು ಕಡ್ಡಾಯ ಪಾಲಿಸಬೇಕು
-ಹರಾಜಿನಲ್ಲಿ ಬಂದ ಹಣವನ್ನು ಶೇ.75ರಷ್ಟು ಮೂಲ ನಿಧಿಗೂ ಶೇ.25ರಷ್ಟು ಮೊತ್ತವನ್ನು ಎಸ್‍ಪಿವಿ (ಸ್ಪೆಷಲ್ ಪರ್ಪಸ್ ವೆಹಿಕಲ್)ಗೂ ನೀಡಬೇಕು

ಮರು ಹರಾಜಾಗಲಿರುವ ಸಿ ವರ್ಗದ ಲೈಸೆನ್ಸ್ ಗಳು
ಡೆಕ್ಕನ್ ಮೈನಿಂಗ್ ಸಿಂಡಿಕೇಟ್, ಕಾರ್ತಿಕೇಯಾಸ್, ಬಿ.ಆರ್. ಯೋಗೇಂದ್ರನಾಥ್ ಸಿಂಗ್, ವಿ.ಎಸ್.ಲಾಡ್ , ರಾಮಾರಾವ್ ಪೋಗ್, ಲಕ್ಷ್ಮಿನಾರಾಯಣ ಮೈನಿಂಗ್, ರಾಮಗಡ ಮೈನ್ಸ್ ಅಂಡ್ ಮಿನರಲ್ಸ್ , ಚನ್ನಕೇಶವರೆಡ್ಡಿ, ನಿಧಿ ಮೈನಿಂಗ್ ಕಂಪನಿ, ಎಸ್‍ಡಿ ಮಿನರಲ್, ಶ್ರೀನಿವಾಸಲು, ತುಂಗಭದ್ರ ಮಿನರಲ್, ಮಿನರಲ್ಸ್ ಆ್ಯಂಡ್ ಮೈನ್ಸ್ ಟ್ರೇಡರ್ಸ್.

ತನಿಖಾ ಪ್ರಗತಿ ವರದಿಗೆ ನೀಡಲು ಆದೇಶ
ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ನಡೆಯುತ್ತಿರುವ ತನಿಖೆಯ ಪ್ರಗತಿ ವರದಿ ನೀಡುವಂತೆ ಸುಪ್ರೀಂಕೋರ್ಟ್ ನ್ಯಾಯಪೀಠ ಸಿಬಿಐಗೆ ಆದೇಶ ನೀಡಿದೆ. ಗುರುವಾರ ವಿಚಾರಣೆ ವೇಳೆ ದೂರುದಾರ ಎಸ್.ಆರ್. ಹಿರೇಮಠ ಪರ ವಕೀಲರಾದ ಪ್ರಶಾಂತ್ ಭೂಷಣ್ ಅವರು, ಯಡಿಯೂರಪ್ಪ ಮತ್ತು ಜನಾರ್ದನ ರೆಡ್ಡಿ ವಿರುದ್ಧ ನಡೆಯುತ್ತಿರುವ ಸಿಬಿಐ ತನಿಖೆ ನಿಧಾನಗತಿಯಲ್ಲಿ ನಡೆದಿರುವ ಬಗ್ಗೆ ನ್ಯಾಯ ಪೀಠದ ಗಮನಕ್ಕೆ ತಂದರು.

ಸಿಬಿಐ ತನಿಖೆಗೆ ವಹಿಸಿ ಬಹಳ ಕಾಲವಾದರೂ ನಿರೀಕ್ಷಿತ ಫಲಿತಾಂಶ ಬಾರದೇ ಇರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ ಎಂಬ ಅಂಶವನ್ನು ನ್ಯಾಯಪೀಠದ ಮುಂದಿಟ್ಟರು. ಜತೆಗೆ ತ್ವರಿತ ತನಿಖೆ ನಡೆಸಲು ಆದೇಶ ನೀಡುವಂತೆ ಮನವಿ ಮಾಡಿದರು. ಪ್ರಶಾಂತ್ ಭೂಷಣ್ ಅವರ ಮನವಿ ಒಪ್ಪಿದ ನ್ಯಾಯಪೀಠವು ತನಿಖಾವರದಿ ಪ್ರಗತಿಯನ್ನು ನೀಡುವಂತೆ ಸಿಬಿಐಗೆ ಸೂಚಿಸಿತು.

ಯಡಿಯೂರಪ್ಪ ಅವರ ವಿರುದ್ಧ ರಾಚೇನಹಳ್ಳಿ ಡಿ ನೋಟಿಫಿಕೇಶನ್ ಪ್ರಕರಣ ಮತ್ತು ಪ್ರೇರಣಾ ಟ್ರಸ್ಟ್ ಗೆ ಜಿಂದಾಲ್ ಕಂಪನಿಯಿಂದ ದೇಣಿಗೆ ಸ್ವೀಕರಿಸಿದ ಪ್ರಕರಣವನ್ನು ಸಿಬಿಐ ತನಿಖೆ ಮಾಡುತ್ತಿದೆ. ಜನಾರ್ದನ ರೆಡ್ಡಿ ಒಎಂಸಿ ಅಕ್ರಮ ಗಣಿಗಾರಿಕೆ ಕುರಿತಂತೆ ಸಿಬಿಐ ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com