

ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವಿಶ್ವಸಂಸ್ಥೆ ಕರೆ ನೀಡುತ್ತಿದ್ದಂತೆಯೇ ವಿಶ್ವಾದ್ಯಂತ ಯೋಗ ದಿನಾಚರಣೆಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿದ್ದು, ಭಾನುವಾರ ವಿಶ್ವದ ಸುಮಾರು 177 ದೇಶಗಳು ಯೋಗ ದಿನಾಚರಣೆಯನ್ನು ಆಚರಿಸುತ್ತಿವೆ.
ಮಲೇಷ್ಯಾದಲ್ಲಿ ಪ್ರಥಮವಾಗಿ ಯೋಗ ದಿನಾಚರಣೆಯನ್ನು ಆಚರಿಸಲಾಗಿದ್ದು, ಮಲೇಷ್ಯಾದ ಸಾವಿರಾರು ಮಂದಿ ಏಕಕಾಲದಲ್ಲಿ ಯೋಗ ಮಾಡುವ ಮೂಲಕ ವಿಶ್ವದ ಮೊದಲ ಯೋಗ ದಿನಾಚರಣೆ ಮಾಡಿದ ಮೊದಲ ದೇಶ ಎಂಬ ಖ್ಯಾತಿಗೆ ಮಲೇಶಷ್ಯಾ ಪಾತ್ರವಾಯಿತು. ಬಳಿಕ ತೈವಾನ್ ನಲ್ಲಿಯೂ ನೂರಾರು ಯುವಕರು ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆ ಮಾಡಿದರು.
ಇದಲ್ಲದೆ ಪ್ರಮುಖವಾಗಿ ವಿಶ್ವದ 49 ಮುಸ್ಲಿಂ ರಾಷ್ಟ್ರಗಳಲ್ಲಿಯೂ ಯೋಗ ದಿನಾಚರಣೆಯನ್ನು ಆಚರಿಸಲಾಗಿದ್ದು, ಮಲೇಷ್ಯಾ, ತೈವಾನ್, ಮಾಲಿ, ಬಾಂಗ್ಲಾದೇಶ, ಈಜಿಪ್ಟ್, ಟರ್ಕಿ, ಸುಡಾನ್ ಸೇರಿದಂತೆ ವಿಶ್ವದ 49 ಮುಸ್ಲಿಂ ರಾಷ್ಟ್ರಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗಿದೆ.
ವಿಶ್ವಸಂಸ್ಥೆ ಯೋಗ ದಿನಾಚರಣೆಯಲ್ಲಿ ಸುಷ್ಮಾ ಸ್ವರಾಜ್ ಭಾಗಿ
ಇದೇ ವೇಳೆ ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅರು ಪಾಲ್ಗೊಂಡಿದ್ದರು. ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ನಲ್ಲಿ ನಿರ್ಮಿಸಲಾಗಿದ್ದ ವಿಶೇಷ ವೇದಿಕೆಯಲ್ಲಿ ಅಮೆರಿಕದ ಸುಮಾರು 30 ಸಾವಿರ ನಾಗರಿಕರು ಯೋಗಾಭ್ಯಾಸ ಮಾಡಿದರು.
ಇದಲ್ಲದೆ ಪಾಕಿಸ್ತಾನ, ತೈವಾನ್, ಸೌದಿ ಅರೇಬಿಯಾ, ಮಲೇಷ್ಯಾ ಸೇರಿದಂತೆ ವಿಶ್ವದ ನಾನಾ ದೇಶಗಳ ಪ್ರತಿನಿಧಿಗಳು ವಿಶ್ವಸಂಸ್ಥೆ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಶ್ವಸಂಸ್ಥೆ ಮುಖ್ಯಸ್ಥ ಬಾನ್ ಕಿ ಮೂನ್ ಸೇರಿದಂತೆ ವಿಶ್ವದ ನಾನಾ ದೇಶದ ಮುಖಂಡರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದಲ್ಲದೆ ಭಾರತ, ಶ್ರೀಲಂಕಾ, ಜಪಾನ್, ಚೀನಾ ಸೇರಿದಂತೆ ವಿಶ್ವದ ಸುಮಾರು 177 ದೇಶಗಳಲ್ಲಿ ಏಕಕಾಲದಲ್ಲಿ ಯೋಗ ದಿನಾಚರಣೆ ಮಾಡಲಾಯಿತು.