

ನವದೆಹಲಿ: ಕರ್ನಾಟಕ ಉಚ್ಛ ನ್ಯಾಯಾಲದ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಸುಭ್ರೋ ಕಮಲ್ ಮುಖರ್ಜಿ ಅವರನ್ನು ನೇಮಕ ಮಾಡಲಾಗಿದೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸುಭ್ರೋ ಕಮಲ್ ಮುಖರ್ಜಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಪ್ರಸ್ತುತ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಧೀರೆಂದ್ರ ಹಿರಾಲಾಲ್ ವಘೇಲಾ (ಡಿಹೆಚ್ ವಘೇಲಾ) ಅವರನ್ನು ಒರಿಸ್ಸಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಿ ವರ್ಗ ಮಾಡಲಾಗಿತ್ತು.
2015ರ ಏಪ್ರಿಲ್ 15ರಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಸುಭ್ರೋ ಕಮಲ್ ಮುಖರ್ಜಿ ಅವರಿಗೆ 2015ರ ಜೂನ್ 1ರಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಡಿಹೆಚ್ ವಘೇಲಾ ಅವರು ಒಡಿಶಾ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ವರ್ಗಾವಣೆಯಾದ ಬಳಿಕ ಅವರ ಸ್ಥಾನಕ್ಕೆ ಉಸ್ತುವಾರಿಯಾಗಿ ಬಡ್ತಿ ಪಡೆದಿದ್ದ ನ್ಯಾಯಮೂರ್ತಿ ಮುಖರ್ಜಿ ಅವರು ಇನ್ನು ಮುಂದೆ ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಕರ್ತವ್ಯಗಳನ್ನು ನಿರ್ವಹಿಸುವರು ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.
1955ರ ಅಕ್ಟೋಬರ್ 10ರಂದು ಜನಿಸಿದ ಮುಖರ್ಜಿ ಅವರು ಕೋಲ್ಕತ್ತ ವಿಶ್ವವಿದ್ಯಾಲಯದಿಂದ ಪದವಿ ಸ್ನಾತಕೋತ್ತರ ಪದವಿ ಪಡೆದಿದ್ದು, ಬಳಿಕ 1982ರ ಜುಲೈ 5ರಂದು ಮುಖ್ಯವಾಗಿ ಸಿವಿಲ್ ಮತ್ತು ರಿಟ್ ವಿಚಾರಗಳಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದರು. 2000 ಸೆಪ್ಟೆಂಬರ್ 15ರಂದು ಕೋಲ್ಕತ್ತ ಹೈಕೋರ್ಟ್ ನ ಖಾಯಂ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು. 2015ರ ಏಪ್ರಿಲ್ 15ರಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.