

ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿ ಬಿಕ್ಕಟ್ಟು ಉಂಟಾಗಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಆಪ್ ಹಿರಿಯ ನೇತಾರ ಯೋಗೇಂದ್ರ ಯಾದವ್ ಹೇಳಿದ್ದಾರೆ. ಆಪ್‌ನಲ್ಲಿ ಅಂಥದ್ದೇನೂ ಸಂಭವಿಸಿಲ್ಲ. ನಾವು ಚುನಾವಣೆಯಲ್ಲಿ ಗೆಲವು ಸಾಧಿಸಿದ ನಂತರ ಮುಂದಿನ ಕಾರ್ಯಗಳ ಬಗ್ಗೆ ಯೋಚಿಸುತ್ತಿದ್ದೇವೆ. ದೆಹಲಿಯ ಜನರು ನಮಗೆ ದೊಡ್ಡ ಜವಾಬ್ದಾರಿಯನ್ನು ವಹಿಸಿದ್ದಾರೆ. ಅದೆಲ್ಲದರ ನಡುವೆ ಬಿಕ್ಕಟ್ಟು ಉಂಟುಮಾಡುವಂತಹ ಸಣ್ಣತನದ ಕಾರ್ಯಗಳನ್ನು ನಾವು ಮಾಡಲ್ಲ.
ಕೆಲವು ದಿನಗಳಿಂದೀಚೆಗೆ ನನ್ನ ಮತ್ತು ಪ್ರಶಾಂತ್ ಭೂಷಣ್ ಅವರ ಬಗ್ಗೆ ಹಲವಾರು ಸುದ್ದಿಗಳು ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಮ್ಮ ಬಗ್ಗೆ ಹೊಸ ಹೊಸ ಕತೆಗಳನ್ನು ಸೃಷ್ಟಿಸಿ, ವಿವಾದಗಳನ್ನು ಹುಟ್ಟಿ ಹಾಕಲಾಗುತ್ತಿದೆ. ಆದರೆ ಇದೆಲ್ಲವೂ ತಮಾಷೆಯಂತೆ ನನಗೆ ಕಾಣುತ್ತಿದೆ. ಯಾಕೆಂದರೆ ಇದೆಲ್ಲವೂ ನಿರಾಧಾರಿತ. ಅಂಥಾ ಕತೆಗಳನ್ನು ಸೃಷ್ಟಿಸುವವರ ಬಗ್ಗೆ ನನಗೆ ಮರುಕವಿದೆ. ದೆಹಲಿ ಜನರು ನಮಗೆ ಅಧಿಕಾರ ಕೊಟ್ಟಿದ್ದಾರೆ. ನಮ್ಮಿಂದ ಅವರಿಗೆ ದೊಡ್ಡ ನಿರೀಕ್ಷೆಯಿದೆ. ಈ ನಿರೀಕ್ಷೆಯನ್ನು ಹುಸಿ ಮಾಡುವ ಕಾರ್ಯಗಳನ್ನು ನಾವು ಮಾಡಲ್ಲ ಎಂದು ಯಾದವ್ ತಮ್ಮ ಫೇಸ್‌ಬುಕ್‌ನಲ್ಲಿ ಬೆರೆದುಕೊಂಡಿದ್ದಾರೆ.