

ಡೆಹ್ರಾಡೂನ್: ಕಳೆದ ಎರಡು ದಿನಗಳಿಂದ ಅತಿ ಹೆಚ್ಚು ಹಿಮ ಬೀಳುತ್ತಿರುವ ಉತ್ತರಾಖಂಡದ ಪಿತೋರಘರ್ ಜಿಲ್ಲೆಯ ಸೈನ್ಯದ ಚೆಕ್ ಪೋಸ್ಟ್ ಒಂದಕ್ಕೆ ಹಿಮಪಾತ (ಅವಾಲಾಂಚೆ) ಅಪ್ಪಳಿಸಿದ್ದರಿಂದ ಇಬ್ಬರು ಸೈನಿಕರು ಮೃತಪಟ್ಟಿದ್ದು, ಮತ್ತೊಬ್ಬರು ಕಾಣೆಯಾಗಿದ್ದಾರೆ.
ಪಿತೋರಘರ್ ಜಿಲ್ಲಾಧಿಕಾರಿ ಸುಶೀಲ್ ಕುಮಾರ್ ಪ್ರಕಾರ ಸೈಲಕ್ ಗಡಿಯ ಚೆಕ್ ಪೋಸ್ಟ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಕುಮಾವ್ ಸ್ಕೌಟ್ಸ್ ರೆಜಿಮೆಂಟ್ ನ ಎಂಟು ಜನ ಸೈನಿಕರನ್ನು ಅಲ್ಲಿ ಗಡಿ ಕಾಯಲು ನೇಮಿಸಲಾಗಿತ್ತು.
"ಇಂಡೋ-ನೇಪಾಳ ಗಡಿಯಲ್ಲಿನ ಈ ಚೆಕ್ ಪೋಸ್ಟ್ ನಲ್ಲಿದ್ದ ೮ ಸೈನಿಕರ ಪೈಕಿ ಇಬ್ಬರು ಮೃತಪಟ್ಟಿದ್ದು, ಒಬ್ಬ ಕಾಣೆಯಾಗಿದ್ದು, ಐವರನ್ನು ರಕ್ಷಿಸಲಾಗಿದೆ"
"ಕಾಣೆಯಾದ ಸೈನಿಕನ ಪತ್ತೆಗೆ ಶೋಧ ಕಾರ್ಯಾಚರಣೆ ಜಾರಿಯಲ್ಲಿದೆ" ಎಂದು ಕುಮಾರ್ ತಿಳಿಸಿದ್ದಾರೆ.
ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಭಾಗೇಶ್ವರ್ ಜಿಲ್ಲೆಯ ಕಪ್ಕೋತ್ ನಲ್ಲಿ ಭೂಕುಸಿತದಿಂದ ಮನೆಯೊಂದು ಕುಸಿದು ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನೆನ್ನೆ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.