

ಮಂಡ್ಯ: ಎರಡು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಮಂಡ್ಯಕ್ಕೆ ತೆರಳಿದ್ದು, ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತ ಲೋಕೇಶ್ ಅವರ ಮನೆಗೆ ಭೇಟಿ ನೀಡಲಿದ್ದಾರೆ.
ಪಾಂಡವಪುರ ತಾಲೂಕಿನ ಸಣಬಿನಕೊಪ್ಪಲು ಗ್ರಾಮದ ನಿವಾಸಿ ಲೋಕೇಶ್ ನಿನ್ನೆಯಷ್ಟೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ಮೃತ ರೈತನ ಮನೆಗೆ ಭೇಟಿ ನೀಡಿದ ರಾಹುಲ್ ಗಾಂಧಿ, ಲೋಕೇಶ್ ಕುಟುಂಬ ಸಾಂತ್ವನ ಹೇಳಿದರು. ಅಲ್ಲದೆ ರೈತನ ಕುಟುಂಬಕ್ಕೆ ಒಂದು ಲಕ್ಷ ರುಪಾಯಿ ಚೆಕ್ ನೀಡಿದರು.
ಇಂದು ಬೆಳಗ್ಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ರಾಹುಲ್ ಗಾಂಧಿ ಮಂಡ್ಯಕ್ಕೆ ಆಗಮಿಸಿದ್ದು, ವಿ.ಸಿ.ಫಾರ್ಮ್ ನಲ್ಲಿ ಪ್ರಗತಿಪರ ರೈತರು, ಕೃಷಿ ವಿವಿಯ ತಜ್ಞರೊಂದಿಗೆ ಸಂವಾದ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಹಾಗೂ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ಕಾಂಗ್ರೆಸ್ ಉಪಾಧ್ಯಕ್ಷರಿಗೆ ಸಾಥ್ ನೀಡಿದ್ದಾರೆ.