

ನವದೆಹಲಿ: ತೀವ್ರ ಚರ್ಚೆಗೆ ಗ್ರಾಸವಾಗಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತು ಅಂತ್ಯವಾಗಿದ್ದು, ನೂತನವಾಗಿ ಮತ್ತೆ ನಾಲ್ಕು ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತು ಅಂತಿಮವಾಗಿ ಇಂದು ಸಂಜೆ ದೆಹಲಿಯಲ್ಲಿ ಅಂತ್ಯವಾಗಿದ್ದು, ಉಪಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರನ್ನು ಮನವೊಲಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿದೆ. ಅಂತೆಯೇ ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯ ಸಚಿವ ಸಂಪುಟಕ್ಕೆ ನಾಲ್ವರು ಸಚಿವರ ಸೇರ್ಪಡೆ ಖಚಿತವಾಗಿದ್ದು, ನಾಳೆ ಸಂಜೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ಸೋನಿಯಾ ಮನವೊಲಿಕೆ; ಪಟ್ಟು ಸಡಿಲಗೊಳಿಸಿದ ಪರಮ್
ದಲಿತ ಸಿಎಂ ವಿವಾದ ಬಗೆಹರಿಯುತ್ತಿದ್ದಂತೇ ಡಿಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರು ಮನವೊಲಿಸಿದ್ದು, ಸಿಎಂ ಸಿದ್ದರಾಮಯ್ಯ ಅವರ ಸಂಪುಟ ಸೇರಲು ಪರಮೇಶ್ವರ ಒಪ್ಪಿದ್ದಾರೆ.
ಫಲ ನೀಡಿದ ದಿಗ್ವಿಜಯ್, ಸಿದ್ದರಾಮಯ್ಯ ಭೇಟಿ
ಇದಕ್ಕೂ ಮುನ್ನ ನಡೆದ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ ಫಲ ನೀಡಿದ್ದು, ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಲ್ವರು ಸಚಿವರ ಸೇರ್ಪಡೆಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅಹ್ಮದ್ ಪಟೇಲ್ ಸೇರಿದಂತೆ ಹಲವು ನಾಯಕರ ಜೊತೆ ಚರ್ಚಿಸಿದರು. ಏತನ್ಮಧ್ಯೆ ಡಾ.ಜಿ.ಪರಮೇಶ್ಚರ್ ಅವರ ಜೊತೆಯೂ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದರು.
ಸಂಪುಟ ಸೇರಲಿರುವ ನಾಯಕರು
ಡಾ.ಜಿ.ಪರಮೇಶ್ವರ್
ಎ.ಮಂಜು
ವಿನಯ್ ಕುಲಕರ್ಣಿ
ಮನೋಹರ್ ತಹಸೀಲ್ದಾರ್