ನವದೆಹಲಿ: ಭೀಕರ ಬರ ಪರಿಸ್ಥಿತಿಯಿಂದ ತತ್ತರಿಸಿರುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ರು. 723.23 ಕೋಟಿ ನೆರವು ನೀಡಲು ಒಪ್ಪಿಗೆ ಸೂಚಿಸಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬರ ಅಧ್ಯಯನ ನಡೆಸಿದ ಅಧಿಕಾರಿಗಳು ನೀಡಿದ ವರದಿ ಆಧಾರದ ಮೇರೆಗೆ ಈ ನೆರವು ನೀಡಲು ಕೇಂದ್ರ ಸಮ್ಮತಿಸಿದೆ.
ಬರಕ್ಕಾಗಿ ಕರ್ನಾಟಕ್ಕೆ ರು.723.23 ಕೋಟಿ ನೆರವು ನೀಡಲಿದ್ದು, ಪ್ರವಾಹ ಪೀಡಿತ ರಾಜ್ಯಗಳಾದ ಪುದುಚೆರಿಗೆ ರು.35.41ಕೋಟಿ ಮತ್ತು ಅರುಣಾಚಲ ಪ್ರದೇಶಕ್ಕೆ 84.33 ಕೋಟಿ ಪರಿಹಾರ ಹಣವನ್ನು ಬಿಡುಗಡೆ ಮಾಡಲಿದೆ.
ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೃಷಿ ಸಚಿವರಾದ ರಾಧ ಮೋಹನ್ ಸಿಂಗ್, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹರ್ಶಿ ಮತ್ತು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
10 ರಾಜ್ಯಗಳ ಪೈಕಿ, ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಬರ ಪೀಡಿತ ರಾಜ್ಯಗಳೆಂದು ಘೋಷಣೆ ಮಾಡಲಾಗಿದೆ.