ನಿರಂತರ 29ನೇ ದಿನಕ್ಕೆ ಕಾಲಿಟ್ಟ ಕಾಶ್ಮೀರ ಕರ್ಫ್ಯೂ; ಮುಂದುವರೆದ ಜನಜೀವನ ಅಸ್ತವ್ಯಸ್ತತೆ
ಕಾಶ್ಮೀರದಲ್ಲಿ ಮತ್ತೆ ಕಾಣಿಸಿಕೊಂಡ ಹಿಂಸೆಯಲ್ಲಿ ಮೂವರು ಮೃತಪಟ್ಟು 150 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಹಲವು ಭಾಗಗಳಲ್ಲಿ ಕರ್ಫ್ಯೂ ಮುಂದುವರೆದಿದೆ. 29 ನೇ ದಿನಕ್ಕೆ ಕಾಲಿಟ್ಟಿರುವ
ಶ್ರೀನಗರ: ಕಾಶ್ಮೀರದಲ್ಲಿ ಮತ್ತೆ ಕಾಣಿಸಿಕೊಂಡ ಹಿಂಸೆಯಲ್ಲಿ ಮೂವರು ಮೃತಪಟ್ಟು 150 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಹಲವು ಭಾಗಗಳಲ್ಲಿ ಕರ್ಫ್ಯೂ ಮುಂದುವರೆದಿದೆ. 29 ನೇ ದಿನಕ್ಕೆ ಕಾಲಿಟ್ಟಿರುವ ಕರ್ಫ್ಯೂವಿನಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.
"ಶ್ರೀನಗರ, ನೌಹಟ್ಟಾ ಖನ್ಯಾರ್, ರೈನಾವರಿ, ಸಫಾಕದಲ್, ಮಹಾರಾಜ್ ಗಂಜ್ ಮತ್ತು ಬಾಟಾಮಾಲು ಪ್ರದೇಶಗಳ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕರ್ಫ್ಯೂ ಮುಂದುವರೆದಿದೆ. ಇದು ಕಾನೂನು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕಾ ಕ್ರಮ" ಎಂದು ಪೊಲಿಸ್ ಅಧಿಕಾರಿ ಹೇಳಿದ್ದಾರೆ.
ಬುಡಗಾಂ ಜಿಲ್ಲೆಯ ನಾಲ್ಕು ಪಟ್ಟಣಗಳಲ್ಲಿ - ಚದೂರ, ಖಾನಸಾಹಿಬ್, ಮಗಮ್ ಮತ್ತು ಬುಡಗಾಂ ನಲ್ಲಿ ಕರ್ಫ್ಯೂ ಮುಂದುವರೆಯಲಿದೆ.
"ಕಣಿವೆಯ ಇನ್ನುಳಿದ ಸ್ಥಳಗಳಲ್ಲಿ ಸೆಕ್ಷನ್ 144 ಜಾರಿಯಲ್ಲಿರಲಿದ್ದು, ನಾಲ್ಕು ಜನಕ್ಕೂ ಹೆಚ್ಚು ಗುಂಪುಕಟ್ಟುವುದನ್ನು ನಿಷೇಧಿಸಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಜಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನು ಭದ್ರತಾ ಪಡೆಗಳು ಹತ್ಯೆಗೈದ ನಂತರ ಜುಲೈ 8 ರಿಂದ ಪ್ರಾರಂಭವಾದ ಪ್ರತಿಭಟನೆ ಮತ್ತು ಗಲಭೆಗಳಲ್ಲಿ ಇಲ್ಲಿಯವರೆಗೂ 54 ಜನ ಮೃತಪಟ್ಟಿದ್ದು, 6000 ಕ್ಕೂಹೆಚ್ಚು ಜನ ಗಾಯಗೊಂಡಿದ್ದಾರೆ.
ಶಾಲಾ-ಕಾಲೇಜು, ಅಂಗಡಿ-ಮುಂಗಟ್ಟುಗಳು ಮುಚ್ಚಲಾಗಿದ್ದು, ಸಾರ್ವಜನಿಕ ಪ್ರಯಾಣ ವ್ಯವಸ್ಥೆ ಕೂಡ ಸ್ಥಗಿತಗೊಂಡಿದೆ. ಸರ್ಕಾರಿ ಕಚೇರಿಗಳಲ್ಲಿ ಕೂಡ ಹಾಜರಾತಿ ವಿರಳವಾಗಿದೆ. ಮೊಬೈಲ್ ಇಂಟರ್ ನೆಟ್ ಕೂಡ ಕಣಿವೆಯಲ್ಲಿ ಸ್ಥಗಿತಗೊಂಡಿದೆ.
ಆಗಸ್ಟ್ 12 ರವೆರೆಗೆ ಕಾಶ್ಮೀರ ಬಂಧ್ ಮುಂದುವರೆಸಲು ಕಾಶ್ಮೀರ ಪ್ರತ್ಯೇಕವಾದಿ ಗುಂಪು ಕರೆನೀಡಿದೆ.