

ನವದೆಹಲಿ: ನೋಟು ನಿಷೇಧ ಪರಿಣಾಮ ದೇಶದ ಅಪಾರ ಜನಸಂಖ್ಯೆಯ ಮೇಲಾಗಿರುವುದರಿಂದ ಬ್ಯಾಂಕುಗಳ ಮುಂದೆ ಸರತಿ ಸಾಲು ಇದ್ದೇ ಇರುತ್ತದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ನಗದು ರಹಿತ ಬ್ಯಾಂಕಿಂಗ್ ಕೇಂದ್ರ ಸರ್ಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ ನೋಟು ನಿಷೇಧ ಪ್ರಮುಖವಾಗಿದ್ದು, ನವೆಂಬರ್ 8ಕ್ಕೂ ಮೊದಲಿಗಿಂತಲೂ ಈಗ ಪೇಪರ್ ಹಣವನ್ನು ಕಡಿಮೆ ಬಳಕೆ ಮಾಡಲು ಯೋಜಿಸಲಾಗಿದೆ. ಔಪಚಾರಿಕ ವಾಣಿಜ್ಯ ವ್ಯವಹಾರ, ವ್ಯಾಪಾರ ಅಭಿವೃದ್ದಿಯಾಗಲಿದೆಯಾದರೂ, ಪೇಪರ್ ಹಣ ಮಾತ್ರ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.
ಇದೇ ವೇಳೆ ಬ್ಯಾಂಕ್ ಗಳ ಮುಂದೆ ಇನ್ನೂ ಮುಂದುವರೆದಿರುವ ಸರತಿ ಸಾಲಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೇಟ್ಲಿ, ಬ್ಯಾಂಕುಗಳಲ್ಲಿ ಶೇ.86ರಷ್ಟು ಹಣ ನಗದಿನ ರೀತಿಯಲ್ಲಿ ಚಲಾವಣೆಯಾಗುತ್ತಿತ್ತು. ಆದರೆ ನೋಟು ನಿಷೇಧದ ಬಳಿಕ ಈ ಪ್ರಕ್ರಿಯೆ ಸ್ಥಗಿತವಾಗಿದೆ. ದೇಶದ ಜನಸಂಖ್ಯೆ ಇಷ್ಟು ದೊಡದಾಗಿರುವಾಗ ಬ್ಯಾಂಕುಗಳ ಮುಂದೆ ಸರತಿ ಸಾಲು ಸಾಮಾನ್ಯವಾಗಿರುತ್ತದೆ. ಆದರೂ ಕೇಂದ್ರ ಸರ್ಕಾರ ಜನರ ಭವಣೆ ನೀಗಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರಕ್ಕೆ ಜನರಿಂದ ವ್ಯಕ್ತವಾದ ಸ್ಪಂಧನೆ ನಿಜಕ್ಕೂ ಅಭೂತಪೂರ್ವವಾಗಿದೆ. ಸರ್ಕಾರದ ನಿರ್ಧಾರದ ವಿರುದ್ಧ ಯಾವುದೇ ರೀತಿಯ ಸಾಮಾಜಿ ಅಸಹಿಷ್ಣುತೆ ಕಂಡುಬಂದಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ.