

ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಪಕ್ಷ ಜಯಭೇರಿ ಬಾರಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ. ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತೃಪ್ತಿ ಪಡಲಿದೆ ಎಂದು ಕೂಡ ಊಹಿಸಿದ್ದಾರೆ.
"ನಾವು ಪಂಜಾಬ್ ಗೆಲ್ಲಲಿದ್ದೇವೆ" ಎಂದು ತಮ್ಮ ನಿವಾಸದಲ್ಲಿ ಪತ್ರಕರ್ತರ ಸಮುದಾಯಕ್ಕೆ ತಿಳಿಸಿರುವ ಕೇಜ್ರಿವಾಲ್ "ಪಂಜಾಬಿನಲ್ಲಿ ದೆಹಲಿಯ ಗೆಲುವು ಮರುಕಳಿಸಲಿದೆ" ಎಂದಿದ್ದಾರೆ.
ಪಂಜಾಬ್ ಯುದ್ಧದಲ್ಲಿ ಕಾಂಗ್ರೆಸ್ ಎರಡನೇ ಸ್ಥಾನ ಪಡೆಯುವ ಸಾಧ್ಯತೆ ಇದ್ದು "ಅಕಾಲಿ ದಳದ ಸ್ಥಿತಿ ಅತಂತ್ರವಾಗಲಿದೆ" ಎಂದಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ದೆಹಲಿಯ ವಿಧಾನಸಭಾ ಚುನಾವಣೆಯ ೭೦ ಕ್ಷೇತ್ರಗಳಲ್ಲಿ ೬೭ ರಲ್ಲಿ ಎಎಪಿ ಗೆಲುವು ಸಾಧಿಸಿತ್ತು.
ಪಂಬಾಬಿನ ಪ್ರತಿ ಕ್ಷೇತ್ರದ, ಪ್ರತಿ ಮತಕಟ್ಟೆಯಲ್ಲೂ ಕಾರ್ಯಕರ್ತರಿದ್ದು ಮನೆಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
"ಉಳಿದವರು ಎಚ್ಚೆತ್ತುಕೊಳ್ಳುವ ವೇಳೆಗೆ ಆಟ ಮುಗಿದಿರುತ್ತದೆ" ಎಂದು ಕೂಡ ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಎಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ "ಸರಿಯಾದ ಸಮಯಕ್ಕೆ ನಾವು ಅಭ್ಯರ್ಥಿಯ ಹೆಸರನ್ನು ತೇಲಿಬಿಡಲಿದ್ದೇವೆ" ಎಂದು ಕೂಡ ಅವರು ಹೇಳಿದ್ದಾರೆ.
ಲೋಕಸಭಾ ಚುನಾವಣೆಯತ್ತ ನಾವಿನ್ನೂ ಗಮನ ಹರಿಸಿಲ್ಲ ಎಂದಿರುವ ಅವರು, ಮುಂದಿನ ವರ್ಷದ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಗಳಲ್ಲೂ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
"ನಾವು ನಿಧಾನಕ್ಕೆ ಹೆಜ್ಜೆ ಇರಿಸಲಿದ್ದೇವೆ. ಉತ್ತರಪ್ರದೇಶದಲ್ಲಿ ಅಗತ್ಯವಿರುವ ಬೆಂಬಲ ನಮಗಿಲ್ಲ" ಎಂದಿದ್ದಾರೆ.