

ನವದೆಹಲಿ: ಆಡಳಿತ ಪಕ್ಷ ಬಿಜೆಪಿ ಪ್ರಚುರಗೊಳಿಸುತ್ತಿರುವ ರಾಷ್ಟ್ರೀಯತೆ ಸರ್ವಾಧಿಕಾರಶಾಹಿ ಎಂದು ತೃಣಮೂಲ ಕಾಂಗ್ರೆಸ್ ಸದಸ್ಯ ಸುಗತ ಬೋಸ್ ಬುಧವಾರ ಲೋಕಸಭೆಯಲ್ಲಿ ಹೇಳಿದ್ದಾರೆ. ಜೆ ಎನ್ ಯು ವಿವಾದದ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು ಈ ಮಾತುಗಳನ್ನು ಹೇಳಿದ್ದಾರೆ.
"ನಾನು ರಾಷ್ಟ್ರವಾದಿ. ಆದರೆ ಇವರು ಹೇಳುವ ರಾಷ್ಟ್ರೀಯತೆ ನಾನು ಒಪ್ಪುವುದಿಲ್ಲ. ಈ ರಾಷ್ಟ್ರೀಯತೆ ಸರ್ವಾಧಿಕಾರಶಾಹಿ" ಎಂದು ಬೋಸ್ ಹೇಳಿದ್ದಾರೆ.
ನಾನು ಎಡಪಂಥೀಯನಲ್ಲದೆ ಇದ್ದರೂ, ಅಭಿವ್ಯಕ್ತಿ ಸ್ವಾತಂತ್ರದ ದೃಷ್ಟಿಯಿಂದ ಜೆ ಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ.
"ಕೆಲವು ಘೋಷಣೆಗಳಿಂದ ಒಡೆದು ಹೋಗುವಷ್ಟು ದುರ್ಬಲವಾಗಿಲ್ಲ, ಭಾರತವೆಂಬ ಕಲ್ಪನೆ" ಎಂದು ಫೆಬ್ರವರಿ ೯ ರಂದು ಜೆ ಎನ್ ಯು ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆಗಳು ಕೇಳಿಬಂದವು ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
"ಭಿನ್ನಾಭಿಪ್ರಾಯಗಳನ್ನು ಕ್ರಿಮಿನಲ್ ಅಪರಾಧಗಳಂತೆ ಕಾಣುವುದನ್ನು ನಾವು ನಿಲ್ಲಿಸಬೇಕು" ಎಂದು ಕೂಡ ಅವರು ಹೇಳಿದ್ದಾರೆ.