ಬೆಂಗಳೂರು: ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಸುದ್ದಿ ಮಾಡುತ್ತಿರುವ ಆಪ್ ಸರ್ಕಾರದ ಸಮ-ಬೆಸ ಸಂಖ್ಯೆಯ ವಾಹನ ಸಂಚಾರ ವ್ಯವಸ್ಥೆ ದೆಹಲಿಯಲ್ಲಿ ಯಶಸ್ವಿಯಾದರೆ ಸಿಲಿಕಾನ್ ಸಿಟಿಯಲ್ಲೂ ಜಾರಿಗೊಳಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಶನಿವಾರ ಹೇಳಿದ್ದಾರೆ.
ಸುಬ್ರಮಣ್ಯಪುರ ಪೊಲೀಸ್ ನೂತನ ವಸತಿ ಗೃಹಗಳನ್ನು ಉದ್ಘಾಟಿಸಿ ಮಾತನಾಡಿದ ಪರಮೇಶ್ವರ, ವಾಹನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಸಮ-ಬೆಸ ಸಂಖ್ಯೆ ವಾಹನ ಸಂಚಾರ ಒಳ್ಳೆಯದು ಎಂದರು.
ಸಮ-ಬೆಸ ಸಂಖ್ಯೆಯ ನಿಯಮ ಈಗ ದೆಹಲಿಯಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದು, ಒಂದು ವೇಳೆ ಯಶಸ್ವಿಯಾದರೆ ಅದನ್ನು ನಗರದಲ್ಲೂ ಜಾರಿಗೆ ತರಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.
ಇದೇ ವೇಳೆ ಗೃಹ ಯೋಜನೆ ಅಡಿಯಲ್ಲಿ ಪೊಲೀಸರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಸದಾಗಿ 3 ಸಾವಿರ ವಸತಿ ಗೃಹಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದಲ್ಲಿ ಸುಬ್ರಮಣ್ಯಪುರದಲ್ಲಿ ಚಾಲನೆ ನೀಡಲಾಗಿದೆ ಎಂದು ಹೇಳಿದರು.