2. ಪ್ರತೀ ಬಾರಿಯೂ ಪಾಕ್ ಮತ್ತು ಭಾರತದ ನಡುವೆ ಮಾತುಕತೆಯಾದಾಗ ಅಲ್ಲಿ ಕಾಶ್ಮೀರ ಸಮಸ್ಯೆ ಪ್ರಸ್ತಾಪವಾಗುತ್ತದೆ. ಆದರೆ ಭಾರತದಲ್ಲಿ ಯಾರ ಆಡಳಿತವೇ ಇರಲಿ, ಯಾವುದೇ ಸರ್ಕಾರಗಳು ಕಾಶ್ಮೀರವನ್ನು ಬಿಟ್ಟುಕೊಡಲು ಒಪ್ಪಿಕೊಂಡಿಲ್ಲ, ಒಪ್ಪಿಕೊಳ್ಳುವುದೂ ಇಲ್ಲ. ಮೋದಿ ಲಾಹೋರ್‌ಗೆ ದಿಢೀರ್ ಭೇಟಿ ಕೊಟ್ಟ ನಂತರ ಪಾಕ್ ನಡುವಿನ ಸಂಬಂಧ ಗಟ್ಟಿಯಾಗುತ್ತದೆ ಎಂಬ ಆಶಯವಿತ್ತು. ಆದರೆ ಪಾಕ್ ಪಠಾಣ್‌ಕೋಟ್‌ನಲ್ಲಿ ದಾಳಿ ನಡೆಸುವ ಮೂಲಕ ಮುಂದಿನ ಮಾತುಕತೆಯನ್ನು ಅತಂತ್ರದಲ್ಲಿರಿಸಿದೆ. ಯುದ್ಧ ನಡೆದಾಗಲೂ, ನಡೆದ ನಂತರವೂ ಉಭಯ ರಾಷ್ಟ್ರಗಳು ಮಾತುಕತೆ ನಡೆಸಿವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನೀವೇನೇ ಮಾತುಕತೆ ನಡೆಸಿದರೂ, ನಾವು ದಾಳಿ ನಡೆಸುವುದನ್ನು ನಿಲ್ಲಿಸಲಾರೆವು ಎಂಬ ಉದ್ದಟತನವನ್ನು ಪಾಕ್ ತೋರಿಸುತ್ತಿದೆ. ಹೀಗಿರುವಾಗ ಪಾಕ್ ಜತೆ ಯಾವ ರೀತಿ ಹಸ್ತಲಾಘವ ಮಾಡಬೇಕೆಂಬ ಪ್ರಶ್ನೆ ಸರ್ಕಾರದ ಮುಂದಿದೆ.