ರೋಹಿತ್ ಮೇಲೆ ಕೇಂದ್ರಾಸ್ತ್ರ..!

ಆತ್ಮಹತ್ಯೆಗೀಡಾದ ಹೈದರಾಬಾದ್ ಕೇಂದ್ರೀಯ ವಿವಿಯ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ಆತ್ಮಹತ್ಯೆಗೀಡಾದ ಹೈದರಾಬಾದ್ ಕೇಂದ್ರೀಯ ವಿವಿಯ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಹಾಗೂ ಇತರ ನಾಲ್ವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ..
ಆತ್ಮಹತ್ಯೆ ಮಾಡಿಕೊಂಡ ದಲಿತ ವಿದ್ಯಾರ್ಥಿ ರೋಹಿತ್ ವೆಮುಲಾ (ಸಂಗ್ರಹ ಚಿತ್ರ)
ಆತ್ಮಹತ್ಯೆ ಮಾಡಿಕೊಂಡ ದಲಿತ ವಿದ್ಯಾರ್ಥಿ ರೋಹಿತ್ ವೆಮುಲಾ (ಸಂಗ್ರಹ ಚಿತ್ರ)
Updated on: 

ಹೈದರಾಬಾದ್: ಆತ್ಮಹತ್ಯೆಗೀಡಾದ ಹೈದರಾಬಾದ್ ಕೇಂದ್ರೀಯ ವಿವಿಯ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಹಾಗೂ ಇತರ ನಾಲ್ವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ವಿವಿಗೆ 6 ಬಾರಿ ಪತ್ರ ಬರೆದಿದ್ದ ವಿಚಾರ ಇದೀಗ ಬಹಿರಂಗವಾಗಿದೆ.

ವಿವಿ ವಿಚಾರದಲ್ಲಿ ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ ಮತ್ತು ಸ್ಮೃತಿ ಇರಾನಿ ಪದೇ ಪದೇ ಒತ್ತಡ ಹೇರುತ್ತಿದ್ದರು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದ್ದು, ಇಡೀ ಪ್ರಕರಣಕ್ಕೆ ತಿರುವು   ನೀಡಿದೆ. ಪದೇ ಪದೇ ವಿವಿಗೆ ಬರೆದಿದ್ದ ಪತ್ರಗಳು ಬಹಿರಂಗವಾಗುತ್ತಿದ್ದಂತೆಂಯೇ ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ ಮತ್ತು ಸ್ಮೃತಿ ಇರಾನಿ ರಾಜೀನಾಮೆಗೆ ಪ್ರತಿಭಟನಾನಿರತ  ವಿದ್ಯಾರ್ಥಿ ಸಮೂಹ ಆಗ್ರಹಿಸಿದೆ. ಅಲ್ಲದೇ, ಇದು ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್, ಸಿಪಿಐ ಸಹ ಕೇಂದ್ರ ಸಚಿವರ ತಲೆದಂಡಕ್ಕೆ ಆಗ್ರಹಿಸಿವೆ. ಈ ಬೆಳವಣಿಗೆಯ ನಡುವೆಂಯೇ,  ರೋಹಿತ್ ವೆಮುಲಾ ಆತ್ಮಹತ್ಯೆ ಸಂಬಂಧ ದೇಶಾದ್ಯಂತ ವಿದ್ಯಾರ್ಥಿಗಳು, ನಾನಾ ಸಂಘಟನೆಗಳು ಪ್ರತಿಭಟನೆ ಮುಂದುವರಿಸಿದ್ದಾರೆ.

26 ವರ್ಷದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ಸೇರಿದಂತೆ ವಿವಿಯ ಐದು ವಿದ್ಯಾರ್ಥಿಗಳು ಪ್ರತಿಭಟನೆಯೊಂದರ ವೇಳೆ ಎಬಿವಿಪಿ ನಾಯಕರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ  ಹೊರಿಸಲಾಗಿತ್ತು. ಆಗ ಐವರನ್ನೂ ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗಿತ್ತು. ವಿವಿ ವಿಚಾರಣೆ ಬಳಿಕ ರೋಹಿತ್ ಸೇರಿ ಎಲ್ಲರನ್ನೂ ಆರೋಪ ಮುಕ್ತಗೊಳಿಸಲಾಗಿತ್ತು. ಆದರೆ, ಸಿಕಂದರಬಾದ್  ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಿದರು. ``ವಿವಿ ಜಾತಿವಾದಿಗಳ, ಉಗ್ರವಾದಿಗಳ, ದೇಶವಿರೋಧಿ ರಾಜಕೀಯದ  ಬೀಡಾಗಿದ್ದು, ಎಬಿವಿಪಿ ಮುಖಂಡನ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳದೆ ವಿವಿ ಮೂಕಪ್ರೇಕ್ಷಕನಾಗಿದೆ,'' ಎಂದು ಕಳೆದ ಆಗಸ್ಟ್ ನಲ್ಲಿ ಕೇಂದ್ರ ಮಾನವ ಸಂಪನ್ಮೂಲ  ಸಚಿವೆ ಸ್ಮೃತಿ ಇರಾನಿಗೆ ಪತ್ರ ಬರೆದು ದೂರು ನೀಡಿದ್ದರು.

ಆ ಪತ್ರ ಸೋಮವಾರ ಬಹಿರಂಗಗೊಂಡಿತ್ತು. ಸಚಿವ ಬಂಡಾರು ಪತ್ರದ ನಂತರ ಸ್ಮೃತಿ ಇರಾನಿ ಸಚಿವೆಯಾಗಿರುವ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ವಿವಿಗೆ ಸತತ 5  ಪತ್ರಗಳನ್ನು ಬರೆದಿತ್ತು. ಬಂಡಾರು ದತ್ತಾತ್ರೇಯ ಉಲ್ಲೇಖಿಸಿರುವ ವಿಚಾರದ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ವಿವಿಗೆ ಪತ್ರಗಳನ್ನು ಬರೆದಿತ್ತು. ಸಚಿವರಿಬ್ಬರು ಹಾಗೂ ವಿವಿಯ  ಉಪಕುಲಪತಿ ನಡುವಿನ ಈ ಪತ್ರ ವ್ಯವಹಾರ ಹಾಗೂ ರಾಜಕೀಯ ಒತ್ತಡವೇ ದಲಿತ ವಿದ್ಯಾರ್ಥಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಸಂಗತಿಗಳು ಎಂಬುದು ಈಗ ಪ್ರಕರಣದ ತೀವ್ರತೆಯನ್ನು  ಇನ್ನಷ್ಟು ಹೆಚ್ಚಿಸಿದೆ.

``ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಶಿಫಾರಸಿನ ಅತಿಪ್ರಮುಖ ವ್ಯಕ್ತಿಗೆ ಸಂಬಂಧಪಟ್ಟ ಪ್ರಕರಣದ ವಿಷಯ ಸೆ.3ರಂದು ಬರೆದ ಪತ್ರದಲ್ಲಿ ಪ್ರಸ್ತಾಪವಾಗಿದೆ. ಅದಾದ ಬಳಿಕ  ಸೆ.24, ಅ. 6, 20 ಹಾಗೂ ನ. 19ರಂದು ಮತ್ತೆ ಮೂರು ಪತ್ರಗಳು ಎಚ್‍ಆರ್‍ಡಿ ಇಲಾಖೆಯಿಂದ ವಿವಿ ಉಪಕುಲಪತಿಗೆ ರವಾನೆಯಾಗಿವೆ. ಕೇಂದ್ರ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಅಧಿೀನ ಕಾರ್ಯ ದರ್ಶಿಗಳಿಂದ ಈ 5 ಪತ್ರಗಳು ಬಂದಿವೆ. ಐದೂ ಪತ್ರಗಳ ವಸ್ತು ಒಂದೇ ಆಗಿದ್ದು, ಸಚಿವ ಬಂಡಾರು ಅವರ ದೂರನ್ನು ಪ್ರಸ್ತಾಪಿಸಿ, ``ಆ ಸಂಬಂಧ ಯಾವ  ಕ್ರಮಕೈಗೊಳ್ಳಲಾಗಿದೆ ಎಂಬ ಬಗ್ಗೆ ವಿವಿ ಈವರೆಗೆ ಮಾಹಿತಿ ನೀಡಿಲ್ಲ ಏಕೆ,'' ಎಂದು ಮತ್ತೆ ಮತ್ತೆ ಬರೆದಿರುವ ಪತ್ರಗಳಲ್ಲಿ ಪ್ರಶ್ನಿಸಲಾಗಿದೆ. ರೋಹಿತ್ ಒಳಗೊಂಡಂತೆ ಎಬಿವಿಪಿ ಮುಖಂಡನ  ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿತ ಐವರು ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಡ ಹೇರಲಾಗಿದೆ. ಪತ್ರಗಳ ಹಿನ್ನೆಲೆಯಲ್ಲಿ ವಿವಿ ಡಿ. 21ರಂದು ರೋಹಿತ್ ಮತ್ತು ಇತರ ನಾಲ್ವರನ್ನು  ವಿವಿ ಅಮಾನತುಗೊಳಿಸಿ, ಹಾಸ್ಟೆಲ್ ಮತ್ತು ಕೆಫೆಟೇರಿಯಾದಿಂದಲೂ ಹೊರ ಹಾಕಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com