

ನವದೆಹಲಿ: ತೀವ್ರ ಅನಾರೋಗ್ಯದಿಂದ ಶನಿವಾರ ನಿಧನರಾದ ರಾಕೇಶ್ ಸಿದ್ದರಾಮಯ್ಯ ಅವರ ಪಾರ್ಥೀವ ಶರೀರ ಬೆಲ್ಜಿಯಂನಿಂದ ಮೈಸೂರಿನತ್ತ ಪಯಣ ಆರಂಭಿಸಿದ್ದು, ಸೋಮವಾರ ಮೈಸೂರಿನಲ್ಲಿ ಅಂತ್ಯ ಸಂಸ್ಕಾರ ನಡೆಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ.
ಬೆಲ್ಜಿಯಂನ ಬ್ರುಸೆಲ್ಸ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ರಾಕೇಶ್ ಅವರ ಪಾರ್ಥೀವ ಶರೀರವನ್ನು ತೆಗೆದುಕೊಂಡು ಬರಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಕೂಡ ಮೈಸೂರಿನತ್ತ ಪಯಣ ಬೆಳೆಸಿದ್ದಾರೆ.
ಇನ್ನು ಮೈಸೂರಿನಲ್ಲಿ ರಾಕೇಶ್ ಸಿದ್ದರಾಮಯ್ಯ ಅವರ ಅಂತ್ಯ ಸಂಸ್ಕಾರಕ್ಕೆ ಮೈಸೂರಿನಲ್ಲಿ ಸಕಲ ಸಿದ್ಧತೆ ನಡೆಸಲಾಗಿದ್ದು, ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ರಾಕೇಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸೋಮವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 1.30ರ ಬಳಿ ಮೈಸೂರಿನ ಟಿ.ಕಾಟೂರಿನ ಸಿದ್ದರಾಮಯ್ಯ ಕುಟುಂಬದ ಮಾಲೀಕತ್ವದ ತೋಟದ ಮನೆಯಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ.
ತಂದೆ ಸಾವಿನ ವಿಷಯವೇ ತಿಳಿಯದ ಮಕ್ಕಳು
ಇನ್ನು ರಾಕೇಶ್ ಸಿದ್ದರಾಮಯ್ಯ ಅವರ ಸಾವಿನ ವಿಚಾರ ಅವರ ಮಕ್ಕಳಾದ ಪವನ್ ಹಾಗೂ ತನ್ಮಯಿಗೆ ತಿಳಿಸಿಲ್ಲವಂತೆ. ಪ್ರಸ್ತುತ ಬೆಂಗಳೂರಿನ ಮನೆಯಲ್ಲಿ ತಮ್ಮ ಅಜ್ಜಿಯೊಂದಿಗಿರುವ ಮಕ್ಕಳಾದ ಪವನ್ ಹಾಗೂ ತನ್ಮಯಿ ತಮ್ಮ ತಂದೆ ಮನೆಗೆ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರಂತೆ. ಈ ವರೆಗೂ ಅವರಿಗೆ ಟಿವಿ ತೋರಿಸಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಳೆದ ಜುಲೈ 21ರಂದು ಸ್ನೇಹಿತರೊಂದಿಗೆ ಬೆಲ್ಜಿಯಂಗೆ ತೆರಳಿದ್ದ ರಾಕೇಶ್ ಸಿದ್ದರಾಮಯ್ಯ ಅವರು, ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಅವರು ಸಾವನ್ನಪ್ಪಿದ್ದರು.