

ಮೈಸೂರು: ಕೇಂದ್ರ ಸಚಿವರು, ರಾಜ್ಯ ಸಚಿವರು, ಮಠಾಧೀಶರು, ರಾಜಕೀಯ ಮುಖಂಡರು, ಚಿತ್ರ ನಟ ದರ್ಶನ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ರಾಕೇಶ್ ಅವರ ಅಂತಿಮ ದರ್ಶನ ಪಡೆದರು.
ಬೆಲ್ಜಿಯಂ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್(39) ಅವರು ಬಹು ಅಂಗಾಂಗ ವೈಫಲ್ಯದಿಂದ ಶನಿವಾರ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ ಬೆಂಗಳೂರಿಗೆ ತರಲಾಗಿದ್ದು ನಂತರ ವಿಶೇಷ ವಿಮಾನದ ಮೂಲಕ ನೇರವಾಗಿ ಮೈಸೂರಿಗೆ ಕೊಂಡೊಯ್ಯಲಾಗಿತ್ತು.
ಮೈಸೂರಿನ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕೇಂದ್ರ ಸಚಿವ ಸದಾನಂದಾಗೌಡ, ವಿಧಾನ ಪರಿಷತ್ ಸದಸ್ಯ ಈಶ್ವರಪ್ಪ, ಬಿಎಸ್ ಯಡಿಯೂರಪ್ಪ, ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ, ಸಚಿವ ಡಿಕೆ ಶಿವಕುಮಾರ್, ಯುಟಿ ಖಾದರ್, ಮಹದೇವಪ್ಪ, ಜಗದೀಶ್ ಶೆಟ್ಟರ್, ಡಾ. ಜಿ ಪರಮೇಶ್ವರ್, ಚಿತ್ರನಟ ದರ್ಶನ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ರಾಕೇಶ್ ಅಂತಿಮ ದರ್ಶನ ಪಡೆದು ಸಿದ್ದರಾಮಯ್ಯನವರಿಗೆ ಸಾಂತ್ವನ ಹೇಳಿದರು.