ಬೆಂಗಳೂರು: ಅನಾರೋಗ್ಯದಿಂದ ನಿನ್ನೆ ಕೆಂಗೇರಿ ಬಳಿ ಇರುವ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ನಡೆದಾಡುವ ದೇವರು, ಶತಾಯುಷಿ ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಅವರು ಗುಣಮುಖರಾಗಿದ್ದು, ಶನಿವಾರ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ.
ಶ್ರೀಗಳನ್ನು ಇಂದು ಮಧ್ಯಾಹ್ನ ಆಸ್ಪತ್ರೆಯಿಂದ ನೇರವಾಗಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಕರೆದೊಯ್ಯಲಾಗಿದೆ. ಶ್ರೀಗಳನ್ನು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡುವ ಮುನ್ನ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಡಾ.ರವೀಂದ್ರ ಅವರು, ಡಾ. ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಸ್ಥಿತಿ ಚೆನ್ನಾಗಿದೆ. ಶ್ರೀಗಳಿಗೆ ಸ್ವಲ್ಪ ಜಾಂಡೀಸ್ ಇತ್ತು. ಅಲ್ಲದೇ ಸ್ವಾಮೀಜಿಯ ಪಿತ್ತನಾಳದಲ್ಲಿ ಬ್ಲಾಕೇಜ್ ಇತ್ತು. ಅದನ್ನು ಇಆರ್ ಪಿಸಿ ಶಸ್ತ್ರಚಿಕಿತ್ಸೆ ಮೂಲಕ ನಿವಾರಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ ಮಧ್ಯಾಹ್ನ ಅವರನ್ನು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಲಾಗುವುದು ಎಂದು ಹೇಳಿದ್ದರು.
ಸಾಮಾನ್ಯವಾಗಿ ಮಲಗಿಸಿ ಎಲ್ಲರಿಗೂ ಶಸ್ತ್ರಚಕಿತ್ಸೆ ಮಾಡಲಾಗುತ್ತದೆ. ಆದರೆ ಶ್ರೀಗಳನ್ನು ಕೂರಿಸಿಕೊಂಡು ಅನಸ್ತೇಷಿಯಾ ನೀಡಿ ಎಂಡೋಸ್ಕೊಪಿ ಮೂಲಕ ಶಸ್ತ್ರಚಿಕಿತ್ಸೆ ನೀಡಲಾಯಿತು ಎಂದು ಅವರು ವಿವರಿಸಿದ್ದಾರೆ.
109ವರ್ಷದ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸೋದು ಸವಾಲಾಗಿತ್ತು. ಇದೇ ಮೊದಲ ಬಾರಿಗೆ ಇಷ್ಟು ವರ್ಷದವರಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದರು.