ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರು ಸೆಪ್ಟಂಬರ್ ಗೆ ತಮ್ಮ ಅವಧಿ ಅಂತ್ಯಗೊಂಡಮೇಲೆ ಆ ಸ್ಥಾನದಲ್ಲಿ ಎರಡನೇ ಅವಧಿ ವಿಸ್ತರಣೆಯನ್ನು ನಿರಾಕರಿಸಲಿದ್ದಾರೆ ಎಂದು ಬುಧವಾರ ಮಾಧ್ಯಮವೊಂದು ವರದಿ ಮಾಡಿದೆ.
ತಮ್ಮ ಅವಧಿಯ ನಂತರ ಅಮೆರಿಕಗೆ ತೆರಳಿ ಅಲ್ಲಿನ ವಿಶ್ವವಿದ್ಯಾಲಯವೊಂದರಲ್ಲಿ ಭಾರತೀಯ ಆರ್ಥಿಕತೆಯ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುವುದು ರಾಜನ್ ಅವರ ಇರಾದೆ ಎಂದು ಅವರು ಕೆಂದ್ರ ಸರ್ಕಾರಕ್ಕೆ ಈಗಾಗಲೇ ತಿಳಿಸಿದ್ದಾರೆ ಎಂದು ರಾಜನ್ ಅವರ ಆಪ್ತರೊಬ್ಬರು ಹೇಳಿರುವುದಾಗಿ ಪಶ್ಚಿಮ ಬಂಗಾಳದ ಮುಂಚೂಣಿ ಪತ್ರಿಕೆ ಆನಂದಬಜಾರ್ ಪತ್ರಿಕಾ ವರದಿ ಮಾಡಿದೆ.
ಇತ್ತೀಚೆಗಷ್ಟೇ ಬಿಜೆಪಿ ಮುಖಂಡ ಸುಬ್ರಮಣ್ಯನ್ ಸ್ವಾಮಿ ರಾಜನ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಅವರನ್ನು ವಜಾಗೊಳಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದರು. ಆದರೆ ರಘುರಾಮ್ ರಾಜನ್ ಅವರನ್ನು ಮುಂದುವರೆಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಲವಿತ್ತು ಎಂದು ಕೂಡ ಪತ್ರಿಕೆ ಹೇಳಿದೆ.
ಸ್ವಾಮಿ ಅವರ ಬೇಡಿಕೆಯ ತರ್ಕವನ್ನು ಹಲವಾರು ಬಿಜೆಪಿ ಮುಖಂಡರು ಪ್ರಶ್ನಿಸಿದ್ದರು. ಗವರ್ನರ್ ಸ್ಥಾನಕ್ಕೆ ರಾಜನ್ ಅವರಿಗೆ ಎರಡು ವರ್ಷಗಳ ಅವಧಿ ವಿಸ್ತರಣೆಯನ್ನು ಮೋದಿ ಬಯಸಿದ್ದರು ಎಂದು ಬಲ್ಲ ಮೂಲಗಳಿಂದ ತಿಳಿಬಂದಿತ್ತಾಗಿ ಕೂಡ ಪತ್ರಿಕೆ ವರದಿ ಮಾಡಿದೆ.
ಕೇಂದ್ರ ಸಚಿವ ಅರುಣ್ ಜೇಟ್ಲಿ ಕೂಡ ರಾಜನ್ ಅವರ ಬೆಂಬಲಕ್ಕೆ ಬಂದು, ರಾಜನ್ ಅವರನ್ನು ವಜಾಗೊಳಿಸಿದರೆ ಜಾಗತಿಕವಾಗಿ ಕೆಟ್ಟ ಸಂದೇಶವನ್ನು ರವಾನಿಸಿದಂತೆ ಆಗುತ್ತದೆ ಎಂದು ಮೋದಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
ಹಲವಾರು ಉದ್ಯಮಿಗಳು ಮತ್ತು ಚಿಂತಕರು ರಾಜನ್ ಅವರನ್ನು ಬೆಂಬಲಿಸಿದ್ದು, ವಿಶ್ವದ ಶ್ರೇಷ್ಠ ಆರ್ಥಿಕತಜ್ಞರಲ್ಲಿ ಒಬ್ಬರು ಮತ್ತು ತಮ್ಮ ಸುಧಾರಣೆಗಳಿಂದ ಭಾರತವನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯಲು ರಾಜನ್ ಅವರಿಗೆ ಶಕ್ತಿಯಿದೆ ಎಂದು ಬಣ್ಣಿಸಲಾಗಿತ್ತು.