ಮಾಜಿ ಸೈನಿಕನ ಪುತ್ರನ ಮೇಲೆ ಪೋಲೀಸರ ಹಲ್ಲೆ; ನಿಮಗೆ ನಾಚಿಕೆಯೇ ಇಲ್ಲವೇ?: ರಾಹುಲ್
ಆತ್ಮಹತ್ಯೆ ಮಾಡಿಕೊಂಡ ಮಾಜಿ ಸೈನಿಕನ ಕುಟುಂಬವನ್ನು ವಶಕ್ಕೆ ತೆಗೆದುಕೊಂಡಿರುವ ದೆಹಲಿ ಪೋಲೀಸರ ಮೇಲೆ 'ನಿಮಗೆ ನಾಚಿಕೆಯೇ ಇಲ್ಲವೇ?" ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ

Published On :
ನವದೆಹಲಿ: ಆತ್ಮಹತ್ಯೆ ಮಾಡಿಕೊಂಡ ಮಾಜಿ ಸೈನಿಕನ ಕುಟುಂಬವನ್ನು ವಶಕ್ಕೆ ತೆಗೆದುಕೊಂಡಿರುವ ದೆಹಲಿ ಪೋಲೀಸರ ಮೇಲೆ 'ನಿಮಗೆ ನಾಚಿಕೆಯೇ ಇಲ್ಲವೇ?" ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.
ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಆಸೀನರಾಗಿದ್ದ ರಾಹುಲ್ ಗಾಂಧಿ, ವಿಚಲಿತರಾಗಿದ್ದಂತೆ ಕಾಣುತ್ತಿದ್ದ ಪೊಲೀಸ್ ಅಧಿಕಾರಿಯ ಮೇಲೆ ಹರಿಹಾಯ್ದಿದ್ದಾರೆ. ಒ ಆರ್ ಒ ಪಿ ಜಾರಿ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮಾಜಿ ಸೈನಿಕ ರಾಮ್ ಕಿಶನ್ ಗ್ರೇವಾಲ್ ಅವರ ಕುಟುಂಬವನ್ನು ಭೇಟಿ ಮಾಡಲು ತೆರಳಿದ್ದಾಗ ರಾಹುಲ್ ಅವರನ್ನು ವಶಕ್ಕೆ ತೆಗೆದುಕೊಂಡದ್ದೇಕೆ ಎಂದು ವಿವರಿಸಲು ಈ ಅಧಿಕಾರಿ ಪ್ರಯತ್ನಿಸುತ್ತಿದ್ದರು.
ಆಸ್ಪತ್ರೆಯಲ್ಲಿ ಕುಟುಂಬ ಸದಸ್ಯರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದರು ಎಂದು ಪ್ರತಿಭಟಿಸಿದ್ದಕ್ಕೆ, ಕುಟುಂಬದ ಸದಸ್ಯರನ್ನು ಬಂಧಿಸಿರುವ ಪೋಲೀಸರ ನಡೆಯನ್ನು ಪ್ರಶ್ನಿಸಿರುವ ರಾಹುಲ್ ಗಾಂಧಿ, ಗ್ರೇವಾಲ್ ಕುಟುಂಬ ಸದಸ್ಯರನ್ನು ಬಂಧಿಸುವುದಕ್ಕೆ ನಿಮಗೆ ನಾಚಿಕೆಯಾಗಲಿಲ್ಲವೇ ಎಂದು ಕುಪಿತರಾಗಿ ಕೇಳಿದ್ದಾರೆ.
"ನೀವು ಅವರ ಕುಟುಂಬ ಸದಸ್ಯರನ್ನು ಬಂಧಿಸುವುದಾದರೆ ನನ್ನನು ಬಂಧಿಸಿ" ಎಂದು ಕೂಡ ಅವರು ಹೇಳಿದ್ದಾರೆ.
ಗ್ರೇವಾಲ್ ಅವರ ಹಿರಿಯ ಪುತ್ರ ಜಸ್ವಂತ್ ಅವರನ್ನು ಪೊಲೀಸರು ಥಳಿಸಿದ್ದರು ಎಂದು ಆರೋಪಿಸಲಾಗಿದೆ. ಪೊಲೀಸ್ ಠಾಣೆಗೆ ಕರೆತರುವ ಮೊದಲು ಅವರ ಕುಟುಂಬ ಸದಸ್ಯರ ಮೇಲೆ ಕೂಡ ಪೊಲೀಸರು ಹಲ್ಲೆ ನಡೆಸಿದ್ದಾರೆ.
"ಪೊಲೀಸರು ನಮ್ಮ ಮೇಲೆ ಬಲಪ್ರಯೋಗ ನಡೆಸಿದ್ದಾರೆ. ನಮಗೆ ಹೊಡೆಯಲಾಗಿದೆ, ಮನ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ನಮಗೆ ನ್ಯಾಯ ಬೇಕು" ಎಂದು ಜಸ್ವಂತ್ ವಿಡಿಯೋವೊಂದರಲ್ಲಿ ಹೇಳಿದ್ದಾರೆ.
ಕನಿಷ್ಠ ಪಕ್ಷ ಅವರ ಕುಟುಂಬದವರನ್ನಾದರೂ ಹೊರಗೆ ಕಳುಹಿಸಿ ಎಂದು ರಾಹುಲ್ ಪೊಲೀಸರಿಗೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


