ದಾಖಲೆ ಇಲ್ಲದ ಹಣಕ್ಕೆ ಕಾದಿದೆ "ಭಾರಿ" ಕಂಟಕ?

ಕಪ್ಪುಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಎಂದು ನೋಟು ನಿಷೇಧ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ದಾಖಲೆ ಇಲ್ಲದ ಹಣದ ಮೇಲೆ ಭಾರಿ ಪ್ರಮಾಣದ ತೆರಿಗೆ ವಿಧಿಸಲು ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಕಪ್ಪುಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಎಂದು ನೋಟು ನಿಷೇಧ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ದಾಖಲೆ ಇಲ್ಲದ ಹಣದ ಮೇಲೆ ಭಾರಿ ಪ್ರಮಾಣದ ತೆರಿಗೆ ವಿಧಿಸಲು ನಿರ್ಧರಿಸಿದೆ.

500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ಬಳಿಕ ಖಾತೆಗಳಲ್ಲಿ ಠೇವಣಿಯಾಗುತ್ತಿರುವ ಹಣದ ಮೇಲೆ ತೀವ್ರ ನಿಗಾ ವಹಿಸುತ್ತಿರುವ ಕೇಂದ್ರ ಸರ್ಕಾರ ಹಾಗೂ ತೆರಿಗೆ ಇಲಾಖೆ ದಾಖಲೆ ಇಲ್ಲದ ಠೇವಣಿ  ಮೇಲೆ ಬರೊಬ್ಬರಿ ಶೇ.60ರಷ್ಟು ತೆರಿಗೆ ಹೇರಲು ನಿರ್ಧರಿಸಿದಂತಿದೆ. ಇದಕ್ಕಾಗಿ ಹೊಸ ಕಾನೂನನ್ನೇ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಇರುವ ಕಾನೂನಿಗೆ ಒಂದಷ್ಟು ತಿದ್ದುಪಡಿ  ತಂದು ಹೊಸ ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಈ ಕುರಿತಂತೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ತುರ್ತು ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿಯೇ ಮಸೂದೆಯನ್ನು  ಮಂಡಿಸಿ ಉಭಯ ಸದನಗಳ ಅನುಮೋದನೆ ಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರವಾಗಲಿ ಅಥವಾ ಕೇಂದ್ರ ವಿತ್ತ ಇಲಾಖೆಯಾಗಲಿ ಯಾವುದೇ ರೀತಿಯ ಅಧಿಕೃತ ಪ್ರಕಟಣೆಯನ್ನು  ಹೊರಡಿಸಿಲ್ಲ.  ಈ ಹಿಂದಷ್ಟೇ ಭಾಷಣವೊಂದರಲ್ಲಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕನಸಿನ ಜನಧನ್ ಖಾತೆಗಳಲ್ಲೂ ಭಾರಿ ಪ್ರಮಾಣದ ಕಪ್ಪುಹಣ ಹರಿದಾಡುತ್ತಿರುವ ಕುರಿತು ಮಾತುಗಳನ್ನಾಡಿದ್ದರು.

ಈ ಹಿನ್ನಲೆಯಲ್ಲಿ ಕಳೆದ ಎರಡು ವಾರಗಳಲ್ಲಿ ಅಂದರೆ ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ಮಾಡಿದ ಬಳಿಕ ಜನಧನ್ ಖಾತೆಗಳ ಮೇಲೆ ನಿಗಾವಹಿಸಲಾಗಿದ್ದು, ಈ ವರೆಗೂ ಸುಮಾರು 21 ಸಾವಿರ ಕೋಟಿ  ರು.ಹಣವನ್ನು ಠೇವಣಿ ಮಾಡಿರುವುದು ಬೆಳಕಿಗೆ ಬಂದಿದೆ. ಇವುಗಳಲ್ಲಿ ಬಹುತೇಕ ಕಪ್ಪುಹಣ ಠೇವಣಿಯಾಗಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ದಾಖಲೆ ಇಲ್ಲದ ಹಣಕ್ಕೆ ಭಾರಿ ಪ್ರಮಾಣದ ತೆರಿಗೆ  ವಿಧಿಸಲು ನಿರ್ಧರಿಸಿದೆ.

ಈ ಹಿಂದೆ ಸ್ವಯಂ ಆಗಿ ಕಪ್ಪುಹಣ ಘೋಷಣೆ ಮಾಡಿದವರಿಗೆ ಕೇಂದ್ರ ಸರ್ಕಾರ ಶೇ.45ರಷ್ಟು ತೆರಿಗೆ ವಿಧಿಸಿತ್ತು. ಆದರೆ ಇದಕ್ಕೆ ಕೇಂದ್ರ ಸರ್ಕಾರ ನೀಡಿದ್ದ ಕಾಲಾವಕಾಶ ಮುಗಿದಿದ್ದು, ಇದೀಗ ಬಯಲಾಗುವ ಕಪ್ಪುಹಣ ಅಥವಾ ದಾಖಲೆ  ಇಲ್ಲದ ಹಣಕ್ಕೆ ಶೇ.60ರಷ್ಟು ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com