

ನವದೆಹಲಿ: ಬಹು ನಿರೀಕ್ಷಿತ ಕಾವೇರಿ ಮದ್ಯಂತರ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಮಂಗಳವಾರ ಆರಂಭವಾಗಿದ್ದು, ದಿನಾಂತ್ಯದಲ್ಲಿ ಮಧ್ಯಂತರ ಆದೇಶ ನೀಡಬೇಕಾಗುತ್ತದೆ ಎಂದು ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹೇಳಿದ್ದಾರೆ.
ಕಾವೇರಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾ.ಉದಯ್ ಲಲಿತ್ ಹಾಗೂ ನ್ಯಾ.ಅಮಿತ್ ರಾಯ್ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಮಂಗಳವಾರ ವಿಚಾರಣೆ ಆರಂಭವಾಗಿದ್ದು, ಕೇಂದ್ರ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ತಮ್ಮ ವಾದ ಮಂಡಿಸಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಅದು ಶಾಸಕಾಂಗದ ಜವಾಬ್ದಾರಿಯಾಗಿದೆ ಈ ಬಗ್ಗೆ ನಾನು ದಾಖಲೆಗಳನ್ನು ಮತ್ತು ಉಲ್ಲೇಖಗಳನ್ನು ನೀಡುತ್ತೇನೆ ಎಂದು ಹೇಳಿದರು. ಅಲ್ಲದೆ ಕೇಂದ್ರ ಉನ್ನತಾಧಿಕಾರದ ತಂಡದ ವರದಿಯನ್ನು ಕೂಡ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಇನ್ನು ತಮಿಳುನಾಡು ಪರ ವಕೀಲ ಶೇಖರ್ ನಫಾಡೆ ಅವರು ತಮ್ಮ ವಾದ ಮಂಡಿಸಿ ಕಾವೇರಿ ವಿವಾದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ವಾರ್ಷಿಕ ಸಮಸ್ಯೆಯಾಗಿ ಪರಿಣಮಿಸಿದ್ದು, ಐ ತೀರ್ಪು ಪ್ರಶ್ನಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ಬೇಗ ಮಾಡಿ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು ನಿರ್ವಹಣಾ ಮಂಡಳಿ ರಚನೆ ಕುರಿತಂತೆ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ಮುಕ್ತಾಯವಾದರೆ ಪ್ರಕರಣದ ಶೇ. 50 ವಿಚಾರಣೆ ಮುಗಿದಂತೆ. ಹೀಗಾಗಿ ಮೊದಲು ಕೇಂದ್ರ ಸರ್ಕಾರದ ಅರ್ಜಿಯನ್ನು ಇತ್ಯರ್ಥಗೊಳಿಸಬೇಕಿದೆ ಎಂದು ಹೇಳಿದ್ದಾರೆ. ಇದಕ್ಕೆ ಮತ್ತಷ್ಟು ದಿನಗಳು ಬೇಕಾಗಬಹುದು. ಆದರೆ ದಿನಾಂತ್ಯದಲ್ಲಿ ನ್ಯಾಯಾಲಯ ಮಧ್ಯಂತರ ಆದೇಶ ನೀಡಬೇಕಾಗುತ್ತದೆ ಎಂದು ನ್ಯಾಯಾಧೀಶರು ತಿಳಿಸಿದರು.
ಅಂತೆಯೇ ಕಾವೇರಿ ನದಿ ನೀರು ವಿಚಾರವಾಗಿ ಮಾತನಾಡಿದ ನ್ಯಾಯಾಧೀಶರು, ಎರಡೂ ರಾಜ್ಯಗಳಲ್ಲೂ ಸಂಕಷ್ಟ ಇದೆ. ಇಂಥ ಪರಿಸ್ಥಿತಿಯಲ್ಲಿ ಪರಿಹಾರ ಏನು? ಎಂದು ನ್ಯಾ.ಮಿಶ್ರಾ ಪ್ರಶ್ನೆ ಹಾಕಿದರು. ಇದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು ತಾಂತ್ರಿಕ ಉನ್ನತಾಧಿಕಾರದ ತಂಡ ಈಗಾಗಲೇ ಕಾವೇರಿ ಕೊಳ್ಳದ ಜಲಾಶಯಗಳಿಗೆ ಭೇಟಿ ನೀಡಿ ವಾಸ್ತವಾಂಶಗಳನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ನೀಡಿದೆ ಎಂದು ತಿಳಿಸಿದರು.
ಇದೀಗ ನ್ಯಾಯಾಲಯದ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.