

ಬೆಂಗಳೂರು: ವಿವಾದ ಸಂಬಂಧ ಕಾವೇರಿ ಮೇಲ್ವಿಚಾರಣಾ ಸಮಿತಿಯು ಸೋಮವಾರ ಸಭೆ ನಡೆಸುತ್ತಿದ್ದು, ಎಲ್ಲರ ಚಿತ್ತ ಇದೀಗ ಸಿದ್ದರಾಮಯ್ಯ ಅವರ ಮೇಲೆ ಹರಿದಿದೆ.
ನವದೆಹಲಿಯ ಶ್ರಮಶಕ್ತಿ ಭವನದಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ನಡೆಯಲಿದ್ದು, ಸಮರ್ಥವಾಗಿ ವಾದ ಮಂಡಿಸಲು ರಾಜ್ಯ ಸರ್ಕಾರ ಸಕಲ ಸಿದ್ಧತೆಗಳನ್ನು ನಡೆಸಿ ಸಜ್ಜಾಗಿದೆ.
ದೆಹಲಿಯಲ್ಲಿ ನಡೆಯಲಿರುವ ಈ ಸಭೆ ರಾಜ್ಯದ ಜನರಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದ್ದು, ಎಲ್ಲರ ಚಿತ್ತ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತ ಹರಿದಿದೆ. ಮತ್ತಷ್ಟು ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದೇ ಆದರೆ ಮುಂದೆ ಏನು ಮಾಡುವುದು? ಎಂಬ ಪ್ರಶ್ನೆ ರಾಜಕೀಯ ನಾಯಕರು, ಸಾರ್ವಜನಿಕರೂ ಸೇರಿದಂತೆ ಎಲ್ಲರಲ್ಲೂ ಮೂಡತೊಡಗಿದೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ಎರಡು ಬಾರಿಯ ತೀರ್ಪಿನಲ್ಲೂ ರಾಜ್ಯಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ಇಂದು ನಡೆಯಲಿರುವ ಮೇಲುಸ್ತುವಾರಿ ಸಮಿತಿ ಸಭೆ ರಾಜ್ಯಕ್ಕೆ ಅತ್ಯಂತ ಮಹತ್ವದ್ದಾಗಿದೆ. ರಾಜ್ಯದಲ್ಲಿ ಮಳೆಯ ಕೊರತೆ ಎದುರಾಗಿದ್ದು, ಜಲಾಶಯಗಳು ಭರ್ತಿಯಾಗಿಲ್ಲ. ಕೃಷಿಯನ್ನು ಬದಿಗೊತ್ತಿದ್ದರೂ ಕುಡಿಯುವುದಕ್ಕೂ ನೀರಲ್ಲದ ಪರಿಸ್ಥಿತಿ ರಾಜ್ಯಕ್ಕೆ ಎದುರಾಗಿದೆ. ರಾಜ್ಯಕ್ಕೆ ಎದುರಾಗಿರುವ ಪರಿಸ್ಥಿತಿ ಬಗ್ಗೆ ಸಮಿತಿಗೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ಸಾಕಷ್ಟು ಸಿದ್ಧತೆಗಳನ್ನು ನಡೆಸಿದ್ದು, ಕುಡಿಯುವ ನೀರನ್ನೇ ತಮಿಳುನಾಡಿಗೆ ಹರಿಸುತ್ತಿರುವ ಬಗ್ಗೆ ಸಮಿತಿಗೆ ಮಾಹಿತಿ ನೀಡಲಿದೆ ಎಂದು ತಿಳಿದುಬಂದಿದೆ.
ಸಭೆ ಕುರಿತಂತೆ ಮಾತನಾಡಿರುವ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು, ಕಾವೇರಿ ಜಲಾಶಯದಲ್ಲಿ ಪ್ರಸ್ತುತ 27 ಟಿಎಂಸಿ ನೀರಷ್ಟೇ ಉಳಿದಿದೆ. ಬೆಂಗಳೂರು ನಗರ ಸೇರಿದಂತೆ ಇನ್ನಿತರೆ ಪ್ರದೇಶಗಳಿಗೆ ಕುಡಿಯುವುದಕ್ಕೂ ಈ ನೀರು ಸಾಕಾಗುವುದಿಲ್ಲ. ಮತ್ತಷ್ಟು ನೀರು ಬಿಡುಗಡೆ ಮಾಡುವಂತೆ ಒಂದು ವೇಳೆ ಸೂಚನೆ ಬಂದಿದ್ದೇ ಆದರೆ, ರಾಜ್ಯದ ಹಿತಾಸಕ್ತಿಗಳಿಗೆ ಮಾರಣಾಂತಿಕ ಹೊಡೆತ ನೀಡಿದಂತಾಗುತ್ತದೆ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ, ಈ ಹಿಂದೆ ಕಾವೇರಿ ವಿವಾದ ಸಂಬಂಧ ಸೆ.20 ರವರೆಗೆ ತಮಿಳುನಾಡಿಗೆ ಪ್ರತೀ ದಿನ 12 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸುಪ್ರೀಂ ನೀಡಿದ್ದ ಆದೇಶಕ್ಕೆ ಸಿದ್ದರಾಮಯ್ಯ ಅವರು ಬೇಸರ ವ್ಯಕ್ತಪಡಿಸಿ, ಸ್ಥಾನವನ್ನೇ ತ್ಯಜಿಸಲು ತೀರ್ಮಾನಿಸಿದ್ದರು. ನಂತರ ಪಕ್ಷದ ಹೈ ಕಮಾಂಡ್ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿ, ತೀರ್ಮಾನದಿಂದ ಹಿಂದೆ ಸರಿಯುವಂತೆ ಮಾಡಿತ್ತು ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯ ಅವರು ಮೂಲತಃ ಮೈಸೂರು ಮೂಲದವರೇ ಆಗಿದ್ದು, ಸಾರ್ವಜನಿಕರು ಹಾಗೂ ರೈತರ ಪರವಾಗಿ ನಿಂತಿದ್ದೇ ಆದರೆ, ಸುಪ್ರೀಂ ಆದೇಶವನ್ನು ತಿರಸ್ಕರಿ, ಸ್ಥಾನವನ್ನು ತೊರೆಯಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಒಂದು ವೇಳೆ ಒಬ್ಬ ಮುಖ್ಯಮಂತ್ರಿಯಾಗಿ ಹಾಗೂ ರಾಷ್ಟ್ರೀಯ ಪಕ್ಷದ ಪ್ರತಿನಿಧಿಯಾಗಿ ನಿಲ್ಲುವುದಾದರೆ, ಸುಪ್ರೀಂ ಆದೇಶವನ್ನು ಪಾಲಿಸಬೇಕಾಗುತ್ತದೆ. ಹೀಗಾಗಿ, ಸಿದ್ದರಾಮಯ್ಯ ಅವರಿಗೆ ಕಾವೇರಿ ವಿವಾದ ದೊಡ್ಡ ತಲೆ ನೋವಾಗಿ ಪರಿಣಿಸಿದ್ದು. ದೊಡ್ಡ ಅಗ್ನಿಪರೀಕ್ಷೆ ಎದುರಾಗಿದೆ.
ಸಿದ್ದರಾಮಯ್ಯ ಅವರು ಸುಪ್ರೀಂ ಆದೇಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆಯೇ ಜನರ ಪರವಾಗಿ ನಿಂತು ಸ್ಥಾನವನ್ನು ತ್ಯಜಿಸಿದ್ದೇ ಆದರೆ, ಜನರ ಪಾಲಿಗೆ ಹೀರೋ ಆಗಿಬಿಡುತ್ತಾರೆ. ಮುಂದಿನ ರಾಜಕೀಯ ಹೋರಾಟದಲ್ಲೂ ಇದು ಅವರಿಗೆ ಸಹಾಯಕವಾಗುತ್ತದೆ ಎಂದು ಸಿದ್ದರಾಮಯ್ಯ ಅವರ ಆಪ್ತ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಪರವಾಗಿ ನಿಂತು ಸ್ಥಾನವನ್ನು ತೊರೆದಿದ್ದೇ ಆದರೆ, ರಾಜಕೀಯ ಹಾಗೂ ರಾಜ್ಯದಲ್ಲಿ ದೊಡ್ಡ ಸಮಸ್ಯೆಯೇ ಎದುರಾಗಲಿದೆ.
ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇ ಆದರೆ, ಸುಪ್ರೀಂ ಆದೇಶವನ್ನು ಪಾಲಿಸುವಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಕೂಡಲೇ ಹೊಸದಾಗಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಇಲ್ಲವೇ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಬೇಕಾಗುತ್ತದೆ. ಈ ಬೆಳವಣಿಗೆಗಳು ನಡೆದಿದ್ದೇ ಆದರೆ, ಇದು ತಮಿಳುನಾಡಿನ ಶಕ್ತಿಯನ್ನು ಮತ್ತಷ್ಟು ಹೆಚ್ಚು ಮಾಡಲಿದೆ. ಈ ಮಧ್ಯೆಯೇ ಕಾವೇರಿ ಜಲಾಶಯದ ನಿರ್ವಹಣೆಯನ್ನು ತಮಿಳುನಾಡು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳೂ ಹೆಚ್ಚಾಗಲಿದೆ.
ಈ ರೀತಿಯ ಪರಿಸ್ಥಿತಿ ಎದುರಾಗಬಾರದು. ಒಂದು ವೇಳೆ ಎದುರಾಗಿದ್ದೇ ಆದರೆ, ಕಾವೇರಿ ವಿವಾದ ಕುರಿತಂತೆ ಕರ್ನಾಟಕ ಈವರೆಗೂ ಮಾಡಿರುವ ಹೋರಾಟ ಹಾಗೂ ಶತ ಪ್ರಯತ್ನಗಳು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ವಿವಾದ ಸಂಬಂಧ ರಾಜ್ಯ ಸರ್ಕಾರ ಹೂಡಿರುವ ವಿಶೇಷ ಅರ್ಜಿಯ ಅಂತಿಮ ತೀರ್ಪು ಅ.18 ರಂದು ವಿಚಾರಣೆ ನಡೆಯಲಿದ್ದು, ಅ.18 ರವರೆಗಾದರೂ ಜಾಗರೂಗತೆಯಿಂದ ವಿವಾದ ಸಂಬಂಧ ವಾದ ಮಂಡನೆ ಮಾಡುವಂತೆ ವಕೀಲರಿಗೆ ಸೂಚನೆ ನೀಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.