ಭಾರತೀಯ ವಾಯು ಸೇನೆಗೆ ಹಿನ್ನಡೆ: ಮತ್ತೊಂದು "ಸೂಪರ್ ಹರ್ಕ್ಯುಲಸ್" ವಿಮಾನ ಜಖಂ

ಭಾರತೀಯ ವಾಯುಪಡೆಗೆ ಮತ್ತೊಂದು ಹಿನ್ನಡೆಯಾಗಿದ್ದು, ಬೃಹತ್ ಸರಕು ಸಾಗಣೆ ಮತ್ತು ಏರ್ ಲಿಫ್ಟ್ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಸೂಪರ್ ಹರ್ಕ್ಯುಲಸ್" ವಿಮಾನ ಲಡಾಕ್ ನಲ್ಲಿ ಅಪಘಾತಕ್ಕೀಡಾಗಿ ಹಾನಿಗೊಳಗಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಭಾರತೀಯ ವಾಯುಪಡೆಗೆ ಮತ್ತೊಂದು ಹಿನ್ನಡೆಯಾಗಿದ್ದು, ಬೃಹತ್ ಸರಕು ಸಾಗಣೆ ಮತ್ತು ಏರ್ ಲಿಫ್ಟ್ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಸೂಪರ್ ಹರ್ಕ್ಯುಲಸ್" ವಿಮಾನ ಲಡಾಕ್ ನಲ್ಲಿ  ಅಪಘಾತಕ್ಕೀಡಾಗಿ ಹಾನಿಗೊಳಗಾಗಿದೆ.

ಮೂಲಗಳು ತಿಳಿಸಿರುವಂತೆ ಕಳೆದ ಡಿಸೆಂಬರ್ ನಲ್ಲಿ  ಗ್ರೂಪ್ ಕ್ಯಾಪ್ಟನ್ ಚಿತ್ರಾತ್ ಮತ್ತು ಸಹ ಪೈಲಟ್ ಸಿಯಾಚಿನ್ ಸೇನಾ ನೆಲೆಗೆ ವಿಮಾನವನ್ನು ಕೊಂಡೊಯ್ಯುತ್ತಿದ್ದಾಗ ರನ್ ವೇ ನಲ್ಲೇ ವಿಮಾನ ಕಂಬಕ್ಕೆ ಡಿಕ್ಕಿ ಹೊಡೆದಿತ್ತು.  ಪರಿಣಾಮ ವಿಮಾನದ ಪ್ರಮುಖ ಭಾಗಗಳಿಗೆ ಹಾನಿಯಾಗಿ ಜಖಂ ಆಗಿತ್ತು. ಇದೀಗ ಈ ವಿಮಾನ ಬಳಕೆ ಮಾಡಲು ಯೋಗ್ಯವಲ್ಲ ಎಂದು ಹೇಳಲಾಗುತ್ತಿದ್ದು, ಇದರೊಂದಿಗೆ ಭಾರತೀಯ ವಾಯು ಸೇನೆಯಲ್ಲಿರುವ ಸಿ-130ಜೆ ಸೂಪರ್  ಹರ್ಕ್ಯೂಲಸ್ ವಿಮಾನಗಳ ಸಂಖ್ಯೆ ಇದೀಗ ಕೇವಲ ನಾಲ್ಕಕ್ಕೆ ಇಳಿಕೆಯಾಗಿದೆ.

ಈ ಹಿಂದೆ ಅಮೆರಿಕದಿಂದ ಒಟ್ಟು 12 ಸಿ-130ಜೆ ಸೂಪರ್ ಹರ್ಕ್ಯೂಲಸ್ ವಿಮಾನಗಳನ್ನು ಭಾರತ ಖರೀದಿ ಮಾಡಿತ್ತು. ಈ ಪೈಕಿ 2011ರಲ್ಲಿ 6 ವಿಮಾನಗಳು ಭಾರತಕ್ಕೆ ಆಗಮಿಸಿತ್ತು. ದೆಹಲಿ ಹೊರವಲಯದಲ್ಲಿರುವ ಹಿಂಡನ್  ವಾಯುನೆಲೆಯಲ್ಲಿ ಈ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಸೇರಿಸಲಾಗಿತ್ತು. ಬಳಿಕ 2014 ಮಾರ್ಚ್ ನಲ್ಲಿ ಗ್ಲಾಲಿಯರ್ ನಲ್ಲಿ ತರಬೇತಿ ನಡೆಸುತ್ತಿದ್ದ ಸಂದರ್ಭದಲ್ಲಿ ಮೊದಲ ಸಿ-130ಜೆ ಸೂಪರ್ ಹರ್ಕ್ಯೂಲಸ್ ವಿಮಾನ  ಪತನವಾಗಿತ್ತು. ಈ ಭೀಕರ ಅಪಘಾತದಲ್ಲಿ ವಾಯುಸೇನೆಯ 5 ಯೋಧರು ಮೃತಪಟ್ಟಿದ್ದರು.

ಅದರೊಂದಿಗೆ ವಾಯು ಪಡೆ ಬಳಿ ಕೇವಲ 5 ಸಿ-130ಜೆ ಸೂಪರ್ ಹರ್ಕ್ಯೂಲಸ್ ವಿಮಾನಗಳು ಮಾತ್ರ ಉಳಿದಿತ್ತು. ಇದೀಗ ಲಡಾಕ್ ನಲ್ಲಿ ನಡೆದ ಅಪಘಾತದಿಂದಾಗಿ ಮತ್ತೊಂದು ವಿಮಾನ ಬಳಕೆಗೆ ಯೋಗ್ಯವಲ್ಲದಾಗಿದ್ದು, ಪ್ರಸ್ತುತ  ಕೇವಲ 4 ಸಿ-130ಜೆ ಸೂಪರ್ ಹರ್ಕ್ಯೂಲಸ್ ವಿಮಾನಗಳು ಮಾತ್ರ ಸೇವೆ ಸಲ್ಲಿಸುತ್ತಿವೆ. ಈ ಹಿಂದೆ ಭಾರತ ಇಂತಹ 12 ವಿಮಾನಗಳನ್ನು ಖರೀದಿಸಿತ್ತಾದರೂ, ಉಳಿದ ಆರು ವಿಮಾನಗಳು ಸೇನೆಗೆ ಲಭ್ಯಾವಗಲು ಮತ್ತಷ್ಟು ದಿನಗಳು  ಕಾಯಬೇಕಿದೆ. ಈ ವಿಮಾನಗಳನ್ನು ಚೀನಾ ಗಡಿಯಲ್ಲಿ ನಿಯೋಜಿಸಲು ಉದ್ದೇಶಿಸಲಾಗಿದ್ದು, ಪಶ್ಚಿಮ ಬಂಗಾಳದ ಪನಾಘಡ ವಾಯುನೆಲೆಯಲ್ಲಿ ಇವುಗಳನ್ನು ಸೇನೆಗೆ ಸೇರ್ಪಡೆ ಮಾಡುವ ಸಾಧ್ಯತೆ ಇದೆ.

ಒಂದು ವಿಮಾನಕ್ಕೆ ಬರೊಬ್ಬರಿ ಸಾವಿರ ಕೋಟಿ
ಇನ್ನು ಸಿ-130ಜೆ ಸೂಪರ್ ಹರ್ಕ್ಯೂಲಸ್ ಮಾದರಿಯ 6 ವಿಮಾನಗಳನ್ನು ಸುಮಾರು 6 ಸಾವಿರ ಕೋಟಿ ರು. ನೀಡಿ ಅಮೆರಿಕದಿಂದ ಮೂರು ವರ್ಷಗಳ ಹಿಂದೆ ಆಮದು ಮಾಡಿಕೊಳ್ಳಲಾಗಿತ್ತು. ಹೆಚ್ಚುವರಿಯಾಗಿ 6 ಹರ್ಕ್ಯೂಲಸ್  ವಿಮಾನಗಳನ್ನು ತರಿಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅತ್ಯಂತ ಕಡಿಮೆ ವ್ಯಾಪ್ತಿಯ ರನ್‌ ವೇಗಳಲ್ಲಿಯೂ ಚಲಿಸುವ ಸಾಮರ್ಥ್ಯವಿರುವ ಹರ್ಕ್ಯೂಲಸ್ ವಿಮಾನಗಳು ತಲಾ 20 ಟನ್‌ ಗಳವರೆಗೆ ಭಾರ ಹೊರಬಲ್ಲವು.  ತುರ್ತು ಪರಿಸ್ಥಿತಿಯಲ್ಲಿ ಯೋಧರನ್ನು ತ್ವರಿತವಾಗಿ ಅಗತ್ಯ ಸ್ಥಳಕ್ಕೆ ಕರೆಸಿಕೊಳ್ಳಲು ಸೇರಿದಂತೆ ಈ ವಿಮಾನವು ಬಹುಪಯೋಗಿ ಸೇವೆ ಒದಗಿಸಬಲ್ಲದು. ಇತ್ತೀಚೆಗೆ ಮಲೇಷ್ಯಾ ವಿಮಾನ ನಿಗೂಢವಾಗಿ ಕಾಣೆಯಾದಾಗ ಅದರ ಶೋಧ  ಕಾರ್ಯಾಚರಣೆಯಲ್ಲೂ ಹರ್ಕ್ಯೂಲಸ್ ಬಳಕೆಯಾಗಿತ್ತು. ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್ ನಲ್ಲೂ ಯಾವುದೇ ರೀತಿಯ ತಡೆ ಇಲ್ಲದೆ ಈ ವಿಮಾನ ಇಳಿಯುವ ಮೂಲಕ ಚೀನಾಗೆ ದಿದ್ಬ್ರಮೆ ಮೂಡಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com