

ನವದೆಹಲಿ: ದಶಕಗಳ ಹಿಂದಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ವಿರುದ್ಧದ ಆರೋಪಗಳನ್ನು ಕೈ ಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ದೇಶಾದ್ಯಂತ ತೀವ್ರ ಹಿಂಸಾಚಾರ ಮತ್ತು ಕೋಮುಗಲಭೆಗೆ ಕಾರಣವಾಗಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಮುಖಂಡರಾದ ಎಲ್ ಕೆ ಅಡ್ವಾಣಿ, ಆರ್ ಎಸ್ ಎಸ್ ಮುಖಂಡ ಮುರಳಿ ಮನೋಹರ್ ಜೋಷಿ, ಕೇಂದ್ರ ಸಚಿವೆ ಉಮಾಭಾರತಿ ಅವರ ವಿರುದ್ಧದ ಷಡ್ಯಂತ್ರ ಆರೋಪವನ್ನು ತಾಂತ್ರಿಕ ಕಾರಣಗಳಿಂದಾಗಿ ಕೈಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ ವಿಚಾರಣೆ ವಿಳಂಬವಾಗುತ್ತಿರುವುದಕ್ಕೂ ನ್ಯಾಯಾಲಯ ತನ್ನ ಅಸಮಾಧಾನ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಇದೇ ಪ್ರಕರಣ ಸಂಬಂಧ ಎಲ್ ಕೆ ಅಡ್ವಾಣಿ ಸೇರಿದಂತೆ ಇತರೆ 12ಕ್ಕೂ ಹೆಚ್ಚು ಮುಖಂಡರ ವಿರುದ್ಧ ಸಿಬಿಐ ದಾಖಲಿಸಿದ್ದ ಷಡ್ಯಂತ್ರ ಆರೋಪವನ್ನು ಅಲಹಾಬಾದ್ ನ್ಯಾಯಾಲಯ ಕೈಬಿಟ್ಟಿತ್ತು. ಹೀಗಾಗಿ ಅಲಹಾಬಾದ್ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಸಿಬಿಐ ಪ್ರಶ್ನಿಸಿದ್ದು, ಇದರ ವಿಚಾರಣೆ ನಡೆಸಿದ ನ್ಯಾಯಾಲಯ, "ತಾಂತ್ರಿಕವಾಗಿ ಪ್ರಕರಣವನ್ನು ಪರಿಶೀಲಿಸಿದರೆ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ, ವಿನಯ್ ಕಟಿಯಾರ್ ಮತ್ತು ಕಲ್ಯಾಣ್ ಸಿಂಗ್ ಸೇರಿದಂತೆ ಹತ್ತಕ್ಕೂ ಅಧಿಕ ಮುಖಂಡರ ವಿರುದ್ಧದ ಆರೋಪಗಳನ್ನು ಕೈ ಬಿಡಲು ಸಾಧ್ಯವಿಲ್ಲ. ಹೀಗಾಗಿ ವಿಚಾರಣಾಧೀನ ನ್ಯಾಯಾಲಯವನ್ನು ಜಂಟಿ ವಿಚಾರಣೆ ನಡೆಸುವಂತೆ ಕೇಳಲಾಗುತ್ತದೆ ಎಂದು ಹೇಳಿದೆ. ಅಂತೆಯೇ ಮುಂದಿನ ವಿಚಾರಣೆಯನ್ನು ಮಾರ್ಚ್ 22 ಕ್ಕೆ ಮುಂದೂಡಿದ್ದು, ಅಂದು ಎಲ್ ಕೆ ಅಡ್ವಾಣಿ ಸೇರಿದಂತೆ ಇತರೆ 13 ಮಂದಿ ನಾಯಕರ ವಿರುದ್ಧದ ಆರೋಪಗಳನ್ನು ಕೈಬಿಡಬೇಕೇ ಅಥವಾ ಇಲ್ಲವೇ ಎಂಬುದರ ಕುರಿತು ನಿರ್ಣಯ ಕೈಗೊಳ್ಳುವುದಾಗಿಯೂ ಕೋರ್ಟ್ ಹೇಳಿದೆ.
ಅಡ್ವಾಣಿ ಪರ ವಕೀಲರ ವಿರೋಧ
ಇನ್ನು ನ್ಯಾಯಾಲಯದ ಹೇಳಿಕೆಯನ್ನು ವಿರೋಧಿಸಿದ ಅಡ್ವಾಣಿ ಪರ ವಕೀಲರು, ಆರೋಪಗಳನ್ನು ಕೈಬಿಡುವುದಿಲ್ಲವೆಂದಾದರೆ ಆಗ ರಾಯ್ ಬರೇಲಿ ನ್ಯಾಯಾಲಯ ಮತ್ತೆ 183 ಸಾಕ್ಷಿಗಳನ್ನು ವಿಚಾರಣೆ ನಡೆಸಬೇಕಾಗುತ್ತದೆ ಎಂದು ಹೇಳಿದರು.
ಈ ಹಿಂದೆ ಇದೇ ಪ್ರಕರಣ ಸಂಬಂಧ ಕೆಳಹಂತದ ನ್ಯಾಯಾಲಯಗಳು ಎಲ್ ಕೆ ಅಡ್ವಾಣಿ ಸೇರಿದಂತೆ ಇತರೆ 13 ಮಂದಿ ಬಿಜೆಪಿ ಮುಖಂಡರ ವಿರುದ್ಧದ ಆರೋಪಗಳನ್ನು ಕೈಬಿಟ್ಟಿತ್ತು. ಪ್ರಕರಣದಲ್ಲಿದ್ದ ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಅವರ ಹೆಸರನ್ನು ಕೂಡ ಅವರ ನಿಧನದ ಬಳಿಕ ತೆಗೆದುಹಾಕಲಾಗಿತ್ತು.