ವಾರಂಗಲ್: ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮೂರು ಕಾಲಿನ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಬುಧವಾರ ತೆಲಂಗಾಣದಲ್ಲಿ ನಡೆದಿದೆ.
ಜನಗಾಂವ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಸರಿತಾ ಎಂಬ ಮಹಿಳೆ ನಿನ್ನೆ ಮೂರು ಕಾಲಿನ ಮಗುವಿಗೆ ಜನ್ಮ ನೀಡಿರುವುದಾಗಿ ಆಸ್ಪತ್ರೆಯ ವೈದ್ಯ ಡಾ.ಕೆ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.
ಮಗುವಿನ ಸೊಂಟದಲ್ಲಿ ಮೂರನೇ ಕಾಲು ಬೆಳೆದಿದ್ದು, ಅದನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಬಹುದು ಎಂದು ಶ್ರೀನಿವಾಸ್ ಹೇಳಿದ್ದಾರೆ.
ಹೆಚ್ಚುವರಿ ಅಂಗ ಬೆಳೆದಿರುವುದನ್ನು ಹೊರತುಪಡಿಸಿ ಉಳಿದಂತೆ ಮಗು ಆರೋಗ್ಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತಾಯಿ ಮತ್ತು ಮಗುವನ್ನು ಹೈದರಾಬಾದ್ ನಿಲೋಫೆರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.