

ನಾಲ್ಕು ವರ್ಷದ ಪುಟ್ಟ ಮಗು ಮೂಲೆಯಲ್ಲಿ ಕುಳಿತು ತನ್ನಪಾಡಿಗೆ ತಾನು ಬಣ್ಣದ ಆಟಿಕೆಗಳನ್ನು ಜೋಡಿಸುವುದರಲ್ಲಿ ಮಗ್ನವಾಗಿದೆ. ಇತ್ತ ಆ ಮಗುವಿನ ಅಪ್ಪ-ಅಮ್ಮ ಕ್ಷುಲ್ಲಕ ವಿಚಾರಕ್ಕೆ ಪರಸ್ಪರ ಜಗಳವಾಡುತ್ತಿದ್ದಾರೆ. ಅವರಿಗೆ ಆ ಮಗು ಎದುರಿಗಿರುವ ಪರಿವೆಯೇ ಇಲ್ಲ. ಅದಾಗಿ ಎರಡು ವಾರಗಳ ನಂತರ ಆ ಮಗು ಮಾತನಾಡುವಾಗ ಅಚಾನಕ್ಕಾಗಿ ಅಂದು ಅಪ್ಪ ಉಪಯೋಗಿಸಿದ ಆ ಬೈಗುಳವನ್ನೇ ಉಪಯೋಗಿಸಿದೆ. ದಂಪತಿಗೆ ಒಂದೆಡೆ ಆಶ್ಚರ್ಯ, ಮತ್ತೊಂದೆಡೆ ಕೆಟ್ಟ ಶಬ್ದವನ್ನು ಮಗು ಕಲಿಯಿತೆಂಬ ಬೇಸರ. ಕೊಂಚ ಯೋಚಿಸಿದಾಗ ತಾವು ಆ ಮಗುವಿನೆದುರಿಗೆ ಜಗಳವಾಡಿದ ದೃಶ್ಯ ನೆನಪಾಗಿ ತಮ್ಮದೇ ತಪ್ಪಿನ ಅರಿವಾಗಿ ಪಾಪಪ್ರಜ್ಞೆ ಮೂಡುತ್ತದೆ. ಆದರೆ ಹೀಗೆ ಯೋಚಿಸುವ ವ್ಯವಧಾನವಿಲ್ಲದವರ ಮನೆಗಳಲ್ಲಿ ತನ್ನದಲ್ಲದ ತಪ್ಪಿಗೆ ಆ ಮಗು ಶಿಕ್ಷೆ ಅನುಭವಿಸುತ್ತದೆ.
ಏಕೆ ಹೀಗೆ?
ಪ್ರತಿಯೊಬ್ಬರಿಗೂ ತಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸಿ ಗುಣವಂತರನ್ನಾಗಿಸಬೇಕೆಂಬ ಅಭಿಲಾಷೆಯಿರುತ್ತದೆ ನಿಜ. ಆದರೆ ಅದಕ್ಕಿರುವ ಅತ್ಯಂತ ಸುಲಭ ಮಾರ್ಗದ ಬಗ್ಗೆ ಅರಿವಿರುವುದಿಲ್ಲ. ಮಕ್ಕಳು ನಾವು ಹೇಳುವುದನ್ನು ಕಲಿಯುವುದಕ್ಕಿಂತ ನಾವು ಮಾಡುವುದನ್ನು ಬೇಗನೆ ಕಲಿಯುತ್ತವೆ. ನಮ್ಮೆಲ್ಲ ಚಟುವಟಿಕೆಗಳನ್ನು ಅವುಗಳ ಕ್ಯಾಮೆರಾದಂಥ ಪುಟ್ಟ ಕಂಗಳು ಸೆರೆಹಿಡಿಯುತ್ತವೆ. ಹಸಿಮಣ್ಣಿನ ಗೋಡೆಯಂತಿರುವ ಅವರ ಮನಸ್ಸು ಅವೆಲ್ಲವನ್ನೂ ದಾಖಲಿಸಿಕೊಳ್ಳುತ್ತದೆ! ಗೋಡೆ ಹಸಿಯಾಗಿದ್ದಾಗ ಅದಕ್ಕೆ ಒಂದು ಚಿಕ್ಕ ಕಲ್ಲು ಅಂಟಿಕೊಂಡರೂ ಗೋಡೆ ಒಣಗಿದ ಬಳಿಕ ಅದನ್ನು ಜಪ್ಪಯ್ಯ ಅಂದರೂ ಕೀಳಲಾಗದು. ಮಕ್ಕಳ ಮನಸ್ಸೂ ಹಾಗೆಯೇ. ಅವರು ನಮ್ಮ ಮಧ್ಯ ಇರುವಾಗ ಅವರದೇ ಜಗತ್ತಿನಲ್ಲಿದ್ದಂತೆ ಕಂಡರೂ ನಮ್ಮ ಪ್ರತಿ ಚಟುವಟಿಕೆಗಳೂ ಅವುಗಳ ಮನಸ್ಸಿನಲ್ಲಿ ದಾಖಲಾಗುತ್ತವೆ. ಅದಕ್ಕಾಗಿಯೇ ಬೆಳೆಯುತ್ತಿರುವ ಮಕ್ಕಳ ಮನಸ್ಸಿನಲ್ಲಿ ದಾಖಲಾಗುವ ವಿಷಯಗಳ ಬಗ್ಗೆ ನಾವು ಹೆಚ್ಚು ಜಾಗೃತರಾಗಿರಬೇಕು.
ಕೆಲವರು ತಮ್ಮ ಮಕ್ಕಳು ಮನೆಯಲ್ಲಿ ಸರಿಯಾಗಿ ಓದುವುದಿಲ್ಲವೆಂದು ದೂರು ಹೇಳುತ್ತಾರೆ. ಅವರ ಮನೆಗೊಮ್ಮೆ ಭೇಟಿಕೊಟ್ಟು ನೋಡಿ. ಸಂಜೆ ಮನೆಯ ಹಜಾರದಲ್ಲೇ ಆ ಮಗುವಿನ ಕೈಗೆ ಹೋಂವರ್ಕ್ ಪುಸ್ತಕ ಕೊಟ್ಟು, ತಾವು ಜೋರಾಗಿ ವಾಲ್ಯೂಮ್ ಕೊಟ್ಟು ಟಿವಿಯಲ್ಲಿ ಧಾರಾವಾಹಿ ನೋಡುತ್ತಿರುತ್ತಾರೆ. ಇನ್ನು ಆ ಮಗುವಿಗೆ ಓದುವ ಮನಸ್ಸಾದರೂ ಹೇಗೆ ಬರಬೇಕು? ಕೆಲವರು ಪರಿಪಾಲಿಸುವ 'ನಾನು ಹೇಳಿದಂತೆ ಮಾಡು, ನಾನು ಮಾಡುವಂತೆ ಮಾಡಬೇಡ' ಇಲ್ಲಿ ಉಪಯೋಗಕ್ಕೆ ಬರುವುದಿಲ್ಲ.
ತಿಳಿವಳಿಕೆ ಅತ್ಯಗತ್ಯ
ಅದಷ್ಟೇ ಅಲ್ಲ. ಶಾಪಿಂಗ್ ಸೆಂಟರ್‌ನಲ್ಲಿ ಬಟ್ಟೆ ಹುಡುಕುವಾಗಿನ ಅಮ್ಮನ ಆಂಗಿಕ ಭಾಷೆ, ಅಪ್ಪ ಆಫೀಸಿನಿಂದ ಬಂದೊಡನೆ ಕೈಗೆ ಸಿಗುವ ರಿಮೋಟ್‌ನಿಂದ ಟಿವಿ ಚಾನೆಲ್‌ಗಳನ್ನು ಪಟಪಟ ಬದಲಾಯಿಸುವ ಪರಿ, ಮನೆಯಲ್ಲೇ ವಾರಾಂತ್ಯದಲ್ಲಿ ಕುಳಿತು ಪಾರ್ಟಿ ಮಾಡುವ ಅಪ್ಪ ಮದ್ಯದ ಲೋಟವನ್ನು ಹಿಡಿದುಕೊಳ್ಳುವ ರೀತಿ... ಹೀಗೆ ಒಳ್ಳೆಯದು ಕೆಟ್ಟದು ಎಂಬ ಭೇದವಿಲ್ಲದೆ ಎಲ್ಲವನ್ನೂ ಮಕ್ಕಳ ಮನಸ್ಸು ದಾಖಲಿಸಿಕೊಳ್ಳುತ್ತಿರುತ್ತದೆ. ಗಮನಿಸಿದರೆ ಯಾರೂ ಇಲ್ಲದ ಸಮಯದಲ್ಲಿ ಆ ಮಗು ಅದೇ ರೀತಿ ನಟಿಸುತ್ತಿರುತ್ತದೆ ಕೂಡ! ಆದ್ದರಿಂದ ಮಕ್ಕಳಿರುವಾಗ ಏನು ಮಾಡಬೇಕು, ಏನು ಮಾಡಬಾರದು ಎಂಬ ತಿಳಿವಳಿಕೆ ಅತ್ಯಗತ್ಯ.
ಏನು ಮಾಡಬೇಕು?