ಸವರಿಕೊಂಡು ಹೋದವನು!

ಅವನು ಕುಳಿತಿದ್ದಾನೆ ಅಂತ ಅವಳು ಸ್ವಲ್ಪ ಸರಿದೇ ಕುಳಿತಿರುತ್ತಾಳೆ. ಅತ್ಯಂತ ಸಭ್ಯತೆಯ ಲುಕ್ ಕೊಟ್ಟು ಕುಳಿತಿದ್ದವ ಇದ್ದಕ್ಕಿದ್ದಂತೆ 'ಅಕಸ್ಮಾತ್ ಆಗಿ ಟಚ್ಚಾಯಿತು' ಎನ್ನುವ ಪೋಸು ಕೊಟ್ಟು ನಿಧಾನವಾಗಿ ತನ್ನ ಮೊಣಕೈಯನ್ನು ಅವಳ ಸೊಂಟಕ್ಕೆ ತಗುಲಿಸುತ್ತಾನೆ. ಸರಿದು ಕುಳಿತ ಅವಳಲ್ಲಿ ಎಂಥದ್ದೋ ಭಯದ ಜತೆಗೆ, ಅಕಸ್ಮಾತ್ ಆಗಿರಬೇಕು ಅಂದುಕೊಳ್ಳುವಷ್ಟರಲ್ಲಿ ಕೈಯನ್ನೋ, ಸೊಂಟವನ್ನೋ ಚಿವುಟುತ್ತಾನೆ. ಇಂಥ ಅಸಹಜ ಸ್ಪರ್ಶಕ್ಕೆ ಅಸಹ್ಯದ ಜತೆಗೆ ಮನಸ್ಸು ಮೈಯೆಲ್ಲಾ ಉರಿಯುತ್ತದೆ ಅವಳಿಗೆ. ಆದರೆ ಏನು ಮಾಡಬೇಕೆಂದು ತೋಚುವುದಿಲ್ಲ.
ಇದನ್ನು ಪ್ರತಿಭಟಿಸಲು ಕೆಲ ಮಹಿಳೆಯರು ಹೆದರುತ್ತಾರೆ. ಮತ್ತೆ ಕೆಲವರು ಅವನಿಗಷ್ಟೇ ಕೇಳಿಸುವಂತೆ ಆಕ್ಷೇಪಿಸುತ್ತಾರೆ, ಧೈರ್ಯವಂತರಾದರೆ ಕೆನ್ನೆಗೆ ಬಾರಿಸುತ್ತಾರೆ. ಆದರೆ, ಆ ಕಹಿ ನೆನಪು ಅಲ್ಲಿಗೇ ಮುಗಿಯದೆ ಪದೇ ಪದೆ ಕಾಡಿ ಮನಸ್ಸು ಮುದುಡುವಂತೆ ಮಾಡುತ್ತದೆ.
ಅಪರಿಚಿತ ಮಹಿಳೆಯರೊಟ್ಟಿಗೆ ಅಸಭ್ಯವಾಗಿ ನಡೆದುಕೊಳ್ಳುವುದು, ಸ್ಪರ್ಶಿಸಿ ಲೈಂಗಿಕ ತೃಷೆ ತೀರಿಸಿಕೊಳ್ಳುವುದು ಕೆಲವರಿಗೆ ಚಟ. ಇದು ವಿಶೇಷವಾಗಿ ರೈಲು, ಬಸ್ಸು, ವಿಮಾನದ ಪ್ರಯಾಣದ ಸಂದರ್ಭದಲ್ಲಿ ಹೆಚ್ಚು. ಕೆಲವೊಮ್ಮೆ ದಾರಿಯಲ್ಲಿ ಹೋಗುವಾಗ ಮೈಸವರಿಕೊಂಡು ಹೋಗುವುದು, ಅಪ್ಪಿಕೊಳ್ಳಲು ಪ್ರಯತ್ನಿಸುವುದು, ಕೂದಲು ಸವರುವುದು, ಅಂಗಡಿಗಳಲ್ಲಿ ಚಿಲ್ಲರೆ ಕೊಡುವ ನೆಪದಲ್ಲಿ ಕೈ ಸ್ಪರ್ಶಿಸುವುದು... ಒಂದಾ ಎರಡಾ? ಮಹಿಳೆಯರನ್ನು ಅಸಹಜ ಸ್ಪರ್ಶಕ್ಕೆ ಪುರುಷರು ಉಪಯೋಗಿಸಿಕೊಳ್ಳುವ ರೀತಿ ಇದು.
ಇಂಥ ಘಟನೆಗಳು ಮಹಿಳೆಯರಲ್ಲಿ ಆತಂಕ, ಭಯ, ಖಿನ್ನತೆ ಮೂಡಿಸುವುದರೊಂದಿಗೆ ಪುರುಷರ ಬಗ್ಗೆ ಕೆಟ್ಟ ಭಾವನೆಗಳನ್ನು ಮೂಡಿಸುತ್ತದೆ. ಅವರೆಡೆಗಿನ ನಂಬಿಕೆ ಕುಗ್ಗುವಂತೆ ಮಾಡಿ ಎಲ್ಲರನ್ನೂ ಅನುಮಾನದ ದೃಷ್ಟಿಯಲ್ಲಿ ನೋಡುವಂತೆ ಮಾಡುತ್ತದೆ. ಸಾರ್ವಜನಿಕ ಸ್ಥಳ ಅಸುರಕ್ಷಿತ ಎಂಬ ಭಾವನೆ ಹುಟ್ಟುಹಾಕಿ ಸಾಮಾಜಿಕ ಜೀವನದಿಂದ ದೂರ ಸರಿಯುವಂತೆ ಮಾಡುತ್ತದೆ.
ಈ ರೀತಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು 'ಗ್ರೂಪಿಂಗ್' (ಕಾಮಕ್ಕೆ ತಡಕಾಡು) ಎಂದು ಕರೆಯುತ್ತಾರೆ. ಭಾರತದಲ್ಲಿ ಶೇ.30ರಷ್ಟು ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಈ ರೀತಿಯ ಕಹಿ ಅನುಭವ ಪಡೆಯುತ್ತಾರೆ. ವಿದೇಶದಲ್ಲಿ ಇದು ಶೇ.80ರಷ್ಟು. ಶೇ.20ರಷ್ಟು ಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವುದಾದರೆ, ರಸ್ತೆ ಮೇಲೆ ನಡೆಯುವ ಪ್ರಕರಣಗಳ ಸಂಖ್ಯೆ ಶೇ.60.
ಕಾರಣ ಏನು?
ಪುರುಷರ ಇಂಥ ವರ್ತನೆಗೆ ಸಾಮಾಜಿಕ ನಂಬಿಕೆಗಳು ಮತ್ತು ಮಾನಸಿಕ ಸಮಸ್ಯೆಗಳು ಕಾರಣ ಎಂದು ಮನೋವೈದ್ಯರು ಹೇಳುತ್ತಾರೆ. ಆತ್ಮವಿಶ್ವಾಸದಿಂದ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ಹೆಂಗಸರನ್ನು ಕಂಡಾಗ ತಾನೇ ಸಮಾಜದ ಮುಖ್ಯಸ್ಥ, ಇವಳು ನನ್ನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿದ್ದಾಳೆ ಎಂದು ತನ್ನ ಕೋಪ, ಅಸಹಾಯಕತೆಯನ್ನು ಈ ರೀತಿ ಅಸಭ್ಯವಾಗಿ ವರ್ತಿಸುವ ಮೂಲಕ, ಚುಡಾಯಿಸುವ ಮೂಲಕ ತೀರಿಸಿಕೊಳ್ಳುತ್ತಾನೆ. ನಿರ್ಲಕ್ಷ್ಯಕ್ಕೊಳಗಾದ, ಆತ್ಮವಿಶ್ವಾಸವಿಲ್ಲದ ಪುರುಷ ತಾನು ಬಲಿಷ್ಠ ಎಂದು ಸಾಬೀತುಪಡಿಸಲು ಸಾರ್ವಜನಿಕ ಸ್ಥಳಗಳಲ್ಲಿ ಇಂಥ ವಿಕೃತ ಕಾರ್ಯಕ್ಕೆ ಮುಂದಾಗುತ್ತಾನೆ. ಮರ್ಯಾದೆಗೆ ಅಂಜಿ ಹೆಚ್ಚಿನ ಮಹಿಳೆಯರು ಇದನ್ನೆಲ್ಲಾ ಸಹಿಸಿಕೊಂಡುಬಿಡುತ್ತಾರೆ. ಹೀಗಾಗಿ ಈ ರೀತಿಯ ಪ್ರಕರಣಗಳು ಬೆಳಕಿಗೆ ಬರುವುದೇ ಕಡಿಮೆ. ಆದರೆ, ಈ ಕಾಮುಕ ನಾಳೆ ಮತ್ತೊಬ್ಬರಿಗೆ ಮಾಡಲೂ ಹಿಂದೆ ಮುಂದೆ ನೋಡುವುದಿಲ್ಲ.ಟಿ
ಹುಷಾರ್ ಮೇಡಂ...
- ಜನನಿಬಿಡ ಸ್ಥಳಗಳಲ್ಲಿ ಚೆಲ್ಲುಚೆಲ್ಲಾಗಿ ವರ್ತಿಸದಿರಿ.
- ತುಂಬಿ ತುಳುಕುವ ಬಸ್ ಹತ್ತಬೇಡಿ. ರೈಲಿನಲ್ಲಾದರೆ ಮಹಿಳಾ ಬೋಗಿಯನ್ನೇ ಬಳಸಿ.
- ಅಂಗಡಿಯಲ್ಲಿ ಚಿಲ್ಲರೆ ಅಥವಾ ವಸ್ತುಗಳನ್ನು ನೇರವಾಗಿ ಸ್ವೀಕರಿಸದೆ ಟೇಬಲ್ ಮೇಲಿಡಲು ಸೂಚಿಸಿ.
- ತಡ ರಾತ್ರಿ ಅಥವಾ ಬೆಳ್ಳಂಬೆಳಗ್ಗೆ ಮನೆಯಿಂದ ಹೊರಗೆ ಅಡ್ಡಾಡದಿರಿ.
- ಯಾವುದೇ ರೀತಿಯ ಅಶ್ಲೀಲ ಮಾತು, ಟೀಕೆಗೆ ತಕ್ಷಣ ಪ್ರತಿಕ್ರಿಯಿಸಬೇಡಿ.
- ಹಾಕುವ ಬಟ್ಟೆಗಳು ಮೈಮುಚ್ಚುವಂತಿರಲಿ.
- ಒಂದೇ ಸ್ಥಳದಲ್ಲಿ ಅತ್ತಿತ್ತ ತಿರುಗಾಡುತ್ತಾ ಹೆಚ್ಚು ಹೊತ್ತು ನಿಲ್ಲಬೇಡಿ.
- ನಿರ್ಜನ ಪ್ರದೇಶಕ್ಕೆ ಯಾವುದೇ ಕಾರಣಕ್ಕೂ ಹೋಗದಿರಿ.
- ಒಂಟಿಯಾಗಿರುವಾಗ ಅಪರಿಚಿತ ಮಹಿಳೆ ಅಥವಾ ಪುರುಷನ ಜತೆ ಟ್ಯಾಕ್ಸಿ, ಆಟೋ ಪ್ರಯಾಣ ಬೇಡ.
- ರಸ್ತೆಯಲ್ಲಿ ಓಡಾಡುವಾಗ, ಕ್ಯೂನಲ್ಲಿ ನಿಂತಿರುವಾಗ ನಿಮ್ಮ ಹಿಂದೆ ಮುಂದೆ ಇರುವವರ ಬಗ್ಗೆ ಗಮನವಿರಲಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


