ಬೈರೂತ್: ವಿದ್ವಂಸಕ ಕೃತ್ಯಗಳನ್ನು ಎಸಗುವ ಮೂಲಕ ವಿಶ್ವಕ್ಕೆ ಮಾರಕವಾಗಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ವಿರುದ್ಧ ಇದೇ ಮೊದಲ ಬಾರಿಗೆ ಫ್ರೆಂಚ್ ಸೇನೆ ವಾಯುದಾಳಿ ನಡೆಸಿ 30 ಮಂದಿ ಉಗ್ರರನ್ನು ಹತ್ಯೆ ಮಾಡಿದೆ.
ಉಗ್ರರು ನೆಲೆಸಿರುವ ಸಿರಿಯಾ ಮೇಲೆ ಫ್ರೆಂಚ್ ಸೇನೆ ವಾಯುದಾಳಿ ನಡೆಸಿದೆ. ಇದಲ್ಲಿ 12 ಜಿಹಾದಿ ಹುಡುಗರು ಸೇರಿ 30 ಉಗ್ರರು ಮೃತಪಟ್ಟಿದ್ದಾರೆ ಎಂದು ಮಾನವ ಹಕ್ಕುಗಳ ಸಿರಿಯಾ ವೀಕ್ಷಕ ರಮಿ ಅಬ್ದೆಲ್ ರಹಮಾನ್ ತಿಳಿಸಿದ್ದಾರೆ.
ಈ ದಾಳಿಯಲ್ಲಿ ವಿದೇಶಿ ಉಗ್ರರು ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಉಗ್ರರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರಹಮಾನ್ ಹೇಳಿದ್ದಾರೆ.
ಸಿರಿಯಾದ ಡೈಯರ್ ಇಜ್ಜಾರ್ ನಗರದಲ್ಲಿರುವ ಇಸಿಸ್ ಉಗ್ರ ಸಂಘಟನೆ ಕ್ಯಾಂಪ್ ಮೇಲೆ ಭಾನುವಾರ ಫ್ರೆಂಚ್ ಸೇನೆ ವಾಯು ದಾಳಿ ನಡೆಸಿತ್ತು ಎಂದು ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಹೇಳಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲೂ ಇಸಿಸ್ ಕ್ಯಾಂಪ್ ಗಳ ಮೇಲೆ ದಾಳಿ ನಡೆಸುವುದಾಗಿ ಹೇಳಿದ್ದರು.