

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಹಿಲರಿ ಕ್ಲಿಂಟನ್ ಐಸಿಸ್ ಸಂಸ್ಥಾಪಕಿ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ಫ್ಲೋರಿಡಾದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್ ಐಸಿಸ್ ಉಗ್ರ ಸಂಘಟನೆ ಸ್ಥಾಪಿಸಿರುವುದಕ್ಕೆ ಆಕೆಗೆ ಅವರಿಂದಲೇ ಬಹಮಾನ ಕೊಡಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ. ಒರ್ಲಾಂಡೋ, ಸ್ಯಾನ್ ಬರ್ನಾಡಿಯೋ, ವರ್ಲ್ಡ್ ಟ್ರೇಡ್ ಸೆಂಟರ್ ನೋಡಿ, ಎಲ್ಲಾ ಕಡೆ ಐಸಿಸ್ ತನ್ನ ಪ್ರಭುತ್ವ ಸಾಧಿಸುತ್ತಿರುವುದನ್ನು ನಾವು ನೋಡಬೇಕು ಎಂದು ಟ್ರಂಪ್ ಗುಡುಗಿದ್ದಾರೆ.
ಹಿಲರಿ ಕ್ಲಿಂಟನ್ ವಿರುದ್ಧ ಸೋಲುವುದು ಮುಜುಗರದ ಸಂಗತಿ. ಅದೊಂದು ಭಯಂಕರ ಅನುಭವವಾಗಿರುತ್ತದೆ ಎಂದು ಹೇಳಿದ್ದಾರೆ.
ರಿಪಬ್ಲಿಕನ್ ಪಕ್ಷದ ಬಗ್ಗೆ ಮಾಡಿರುವ ವರದಿಗಳನ್ನು ತಳ್ಳಿ ಹಾಕಿದ ಟ್ರಂಪ್ ತಮ್ಮ ಪಕ್ಷ ಒಗ್ಗಟ್ಟಾಗಿದೆ. ಈ ರೀತಿಯ ಒಗ್ಗಟ್ಟನ್ನು ನಾವು ನೋಡಿರಲಿಲ್ಲ, ಹೀಗಾಗಿ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ಟ್ರಂಪ್ ವಿವರಿಸಿದರು.
ಕಳೆದ 7 ತಿಂಗಳಿಂದ ಹಿಲರಿ ಕ್ಲಿಂಟನ್ ಮೋಸಗಾತಿ ಎಂದು ಆರೋಪಿಸುತ್ತಿದ್ದ ಟ್ರಂಪ್, ಇತ್ತೀಚೆಗೆ ಆಕೆ ದೆವ್ವ ಎಂದು ಹೀಯಾಳಿಸಿದ್ದರು.ನಾನು ಈ ಹಿಂದೆಯೇ ಅಧ್ಯಕ್ಷನಾಗಿದ್ದರೇ 9/11 ರಂದು ನಡೆದ ದಾಳಿಯನ್ನು ತಪ್ಪಿಸುತ್ತಿದ್ದೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದರು.