

ಬಾಗ್ದಾದ್: ಇರಾಕ್ ನ ರಾಜಧಾನಿ ಬಾಗ್ದಾದ್ ನ ಜನನಿಬಿಡ ಮಾಲ್ ಮೇಲೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಗೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊಣೆ ಹೊತ್ತಿದೆ. ಈ ದಾಳಿಯಲ್ಲಿ ಕನಿಷ್ಠ ಏಳು ಜನ ಮೃತಪಟ್ಟಿದ್ದರು.
ಶಿಯಾ ಜನರು ಹೆಚ್ಚು ಕೂಡುವ ಬಾಗ್ದಾದ್ ನ ಆಲ್-ಜವಹಾರ ಮಾಲ್ ಮೇಲೆ ತಮ್ಮ ಸಂಘಟನೆಯ ನಾಲ್ಕು ಆತ್ಮಹತ್ಯಾ ಬಾಂಬರ್ ಗಳು ದಾಳಿ ನಡೆಸಿದ್ದಾರೆ ಎಂದು ಅಂತರ್ಜಾಲದಲ್ಲಿ ನೀಡಿರುವ ಹೇಳಿಕೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಘಟನೆ ತಿಳಿಸಿದೆ.
ಶಿಯಾಗಳ ಮಧ್ಯೆ ಮೂವರು ಆತ್ಮಹತ್ಯಾ ಬಾಂಬರ್ ಗಳು ಸ್ಫೋಟಿಸಿಕೊಂಡು ಹಲವರನ್ನು ಕೊಂದಿದ್ದಾರೆ ಮತ್ತು ನಾಲ್ಕನೆಯವನು ಭದ್ರಾತಾ ಪಡೆಗಳತ್ತ ನುಗ್ಗಿ ಅವರನ್ನು ಭಯಭೀತಗೊಳಿಸಲು ಯಶಸ್ವಿಯಾಗಿದ್ದಾನೆ ಎಂದು ಹೇಳಿಕೆ ತಿಳಿಸಿದೆ.
ಈ ದಾಳಿಯಲ್ಲಿ ಕನಿಷ್ಠ ೭ ಜನ ಮೃತಪಟ್ಟಿದ್ದು ೨೦ ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದರು.
ಇರಾಕಿ ಭದ್ರತಾ ಪಡೆಗಳು ಮಾಲ್ ಅನ್ನು ಈಗ ಸುತ್ತುವರೆದಿದ್ದು ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.