

ಇಸ್ಲಮಾಬಾದ್: ಸೌದಿ ಅರೇಬಿಯಾ ಮತ್ತು ಇರಾನ್ ದೇಶಗಳ ನಡುವಿನ ಪ್ರಕ್ಷುಬ್ಧತೆಯನ್ನು ತಿಳಿಗೊಳಿಸಲು ಎರಡು ದೇಶಗಳಿಗೆ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ.
ಜನವರಿ ೧೮ ಮತ್ತು ೧೯ ರಂದು ಸೌದಿ ಅರೇಬಿಯಾ ಮತ್ತು ಇರಾನ್ ಗೆ ತೆರಳಲಿರುವ ಉನ್ನತ ಮಟ್ಟದ ನಿಯೋಗವನ್ನು ನವಾಜ್ ಶರೀಫ್ ಮುನ್ನಡೆಸಲಿದ್ದಾರೆ ಎಂದು ವಿದೇಶಾಂಗ ಕಾರ್ಯಾಲಯದ ಅಧಿಕೃತ ಹೇಳಿಕೆ ತಿಳಿಸಿದೆ.
ನವಾಜ್ ಶರೀಫ್ ರಿಯಾದ್ ನಿಂದ ಟೆಹ್ರಾನ್ ಗೆ ನೇರವಾಗಿ ತೆರಳಲಿದ್ದಾರೆಯೇ ಅಥವಾ ಪ್ರತ್ಯೇಕವಾಗಿ ಇರಾನ್ ಗೆ ಭೇಟಿ ನೀಡಲಿದ್ದಾರೆಯೇ ಎಂಬುದನ್ನು ಹೇಳಿಕೆ ಸ್ಪಷ್ಟೀಕರಿಸಿಲ್ಲ.
ಇರಾನ್ ಮತ್ತು ಸೌದಿ ಅರೇಬಿಯಾ ದೇಶಗಳ ನಡುವೆ ಹೆಚ್ಚಿರುವ ಉದ್ವಿಗ್ನತೆ ಪಾಕಿಸ್ತಾನಕ್ಕೆ ಕಳವಳ ತಂದಿದೆ ಎಂದು ವಿದೇಶಾಂಗ ಕಾರ್ಯಾಲಯದ ಹೇಳಿಕೆ ತಿಳಿಸಿದೆ.
ಸೌದಿ ಅರೇಬಿಯಾ ರಾಯಭಾರಿ ಕಚೇರಿಯ ಎದುರು ನಡೆದ ಪ್ರತಿಭಟನೆಗಳಿಂದಾಗಿ ಇರಾನ್ ಜೊತೆಗಿನ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ರಿಯಾದ್ ಕಳೆದುಕೊಂಡಿತ್ತು.