

ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡ ಹಿಲರಿ ಕ್ಲಿಂಟನ್ ಗೆ ಹಾಲಿ ಅಧ್ಯಕ್ಷ ಬರಾಕ್ ಒಬಾಮ ಬೆಂಬಲ ಸೂಚಿಸಿದ್ದಾರೆ.
ನ್ಯೂಜೆರ್ಸಿ, ನ್ಯೂ ಮೆಕ್ಸಿಕೊ ಮತ್ತು ಸೌತ್ ಡಕೋಟಾ ರಾಜ್ಯಗಳಲ್ಲಿ ನಡೆದ ಪ್ರಾಥಮಿಕ ಚುನಾವಣೆಗಳಲ್ಲಿ ಬಹುಮತ ಪಡೆಯುವ ಮೂಲಕ ಡೆಮಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಹಿಲರಿ ಕ್ಲಿಂಟನ್ ಸ್ಪರ್ಧಿಸುವುದು ಸ್ಪಷ್ಟವಾದ ಬೆನ್ನಲ್ಲೇ ಬರಾಕ್ ಒಬಾಮ ಹಿಲರಿ ಕ್ಲಿಂಟನ್ ಗೆ ಬೆಂಬಲ ನೀಡಿದ್ದು ಗೆಲುವಿಗೆ ಪಕ್ಷದ ಎಲ್ಲರೂ ಒಟ್ಟಾಗುವಂತೆ ಸೂಚಿಸಿದ್ದಾರೆ.
ಅಮೆರಿಕದ ಜನತೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇಂದು ನನ್ನ ಧ್ವನಿಯನ್ನು ಅಮೆರಿಕ ಜನತೆಯೊಂದಿಗೆ ಸೇರಿಸಲು ಬಯಸುತ್ತೇನೆ, ಹಿಲರಿ ಕ್ಲಿಂಟನ್ ಅವರನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಅನುಮೋದಿಸುತ್ತಿದ್ದೇನೆ ಎಂದು ಬರಾಕ್ ಒಬಾಮ ವಿಡಿಯೋ ಮೂಲಕ ಹೇಳಿದ್ದಾರೆ. ಬರಾಕ್ ಒಬಾಮ ಹಾಗೂ ಹಿಲರಿ ಕ್ಲಿಂಟನ್ ಅವರ ಜಂಟಿ ಚುನಾವಣಾ ಪ್ರಚಾರ ಮುಂದಿನ ಬುಧವಾರದಿಂದ ಪ್ರಾರಂಭವಾಗಲಿದೆ. 2008 ರಲ್ಲಿ ಹಾಗೂ 2012 ರಲ್ಲಿ ಸತತ ಎರಡು ಅವಧಿಗೆ ಬರಾಕ್ ಒಬಾಮ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಹಿಲರಿ ಕ್ಲಿಂಟನ್ ಅವರಿಗೆ ಬರಾಕ್ ಒಬಾಮ ಬೆಂಬಲ ನೀಡುವುದು ನಿರೀಕ್ಷಿತವೇ ಆಗಿತ್ತು. ಹಿಲರಿ ಕ್ಲಿಂಟನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯ ಸ್ಥಾನಕ್ಕೆ ನಾಮನಿರ್ದೇಶನಗೊಳ್ಳಲು ಅಗತ್ಯವಾಗಿದ್ದ 2,383 ಪ್ರತಿನಿಧಿಗಳ ಬೆಂಬಲವನ್ನು ಪಡೆದಿದ್ದಾರೆ.