

ವಾಷಿಂಗ್ಟನ್: ಅಮೆರಿಕಾದ ಪಶ್ಚಿಮ ವರ್ಜಿನಿಯಾ ಸ್ಟೇಟ್ ನಲ್ಲಿ ಅಪ್ಪಳಿಸಿದ ಚಂಡಮಾರುತ ಮತ್ತು ತುರ್ತು ಪ್ರವಾಹಕ್ಕೆ ಕನಿಷ್ಠ 23 ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತಪಟ್ಟವರಲ್ಲಿ ಜಾಕ್ಸನ್ ಕೌಂಟಿಯಿಂದ ಕೊಚ್ಚಿ ಹೋದ ನಾಲ್ಕು ವರ್ಷದ ಬಾಲಕನು ಸೇರಿದ್ದಾನೆ. ತನ್ನ ಸಹೋದರಿಯೊಂದಿಗೆ ಆಟವಾಡುವಾಗ, ನುಗ್ಗಿ ಬಂದ ಪ್ರವಾಹಕ್ಕೆ ಆಕಸ್ಮಿಕವಾಗಿ ಬಿದ್ದು ಕೊಚ್ಚಿಹೋದ ದುರ್ಘಟನೆ ನಡೆದಿದೆ.
ಈ ತೀವ್ರ ಪ್ರವಾಹಕ್ಕೆ ರೇವನ್ಸ್ವುಡ್ ನ 8 ವರ್ಷದ ಬಾಲಕ ಕೂಡ ಬಲಿಯಾಗಿದ್ದಾನೆ. ವಿದ್ಯುತ್ ಕಂಬಗಳು ಮತ್ತು ಮರಗಳು ನೆಲಕ್ಕುರುಳಿದ್ದು, ನದಿಗಳಿಂದ ನೀರು ಅಪಾಯಕಾರಿ ಮಟ್ಟಕ್ಕಿಂತಲೂ ಮೇಲೇರಿದ್ದು, ಹಲವಾರು ಜನ ಪ್ರವಾಹದಲ್ಲಿ ಸಿಕ್ಕಿ ರಕ್ಷಣೆಗಾಗಿ ಕಾತರಿಸುವಂತೆ ಮಾಡಿದೆ.
ಪಶ್ಚಿಮ ವರ್ಜಿನಿಯಾದ 48 ಕೌಂಟಿಗಳು ತುರ್ತು ಪರಿಸ್ಥಿತಿ ಘೋಷಿಸಿ, ಸಮರೋಪಾದಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಗಳನ್ನು ಚುರುಕುಗೊಳಿಸಿವೆ.