ಮೊಂಟ್ರಿಯಲ್: ದೇಶ, ವಿದೇಶಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದ್ದ ಖ್ಯಾತ ಧಾರ್ಮಿಕ ಗುರು ನಿರಂಕಾರಿ ಬಾಬಾ ಹರ್ದೇವ್ ಸಿಂಗ್ ಮಹಾರಾಜ್ ಅವರು ಶುಕ್ರವಾರ ಕೆನಡಾದಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ವರದಿಗಳ ಪ್ರಕಾರ, ನಿರಂಕಾರಿ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರಾಗಿದ್ದ ಬಾಬಾ ಹರ್ದೇವ್ ಸಿಂಗ್ ಅವರು ಇಂದು ಕೆನಡಾದ ಮೊಂಟ್ರಿಯಲ್ ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
62 ವರ್ಷದ ಬಾಬಾ ಸಾವಿನಿಂದ ತುಂಬಲಾರದ ನಷ್ಟವಾಗಿದೆ ಎಂದು ನಿರಂಕಾರಿ ಮಿಷನ್ ನ ಮಾಧ್ಯಮ ಹಾಗೂ ಪ್ರಚಾರ ಉಸ್ತುವಾರಿ ಕೃಪಾಸಾಗರ್ ಅವರು ಐಎಎನ್ಎಸ್ ಗೆ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಬಾಬಾ ಹರ್ದೇವ್ ಸಿಂಗ್ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ನಿರಂಕಾರಿ ಬಾಬಾ ಯಾರು?
ಬಾಬಾ ಹರ್ದೇವ್ ಸಿಂಗ್ ಅವರು ನಿರಂಕಾರಿ ಬಾಬಾ ಎಂದೇ ಹೆಸರುವಾಸಿ. ಬಾಬಾ ಅವರು ನಿರಂಕಾರಿ ಮಿಷನ್ ನ ಮುಖ್ಯಸ್ಥರಾಗಿದ್ದಾರೆ. ಹರ್ದೇವ್ ಸಿಂಗ್ ಅವರ ತಂದೆ ಗುರ್ ಬಚನ್ ಸಿಂಗ್ ಅವರ ಹತ್ಯೆಯಾದ ನಂತರ 1980ರಲ್ಲಿ ಮಿಷನ್ ನ ಅಧಿಕಾರವನ್ನು ಹರ್ದೇವ್ ವಹಿಸಿಕೊಂಡಿದ್ದರು.
1954ರ ಫೆಬ್ರುವರಿ 23ರಂದು ಬಾಬಾ ದೆಹಲಿಯಲ್ಲಿ ಜನಿಸಿದ್ದರು. ದೆಹಲಿಯ ಸಂತ ನಿರಂಕಾರಿ ಕಾಲೋನಿಯ ರೋಸರಿ ಪಬ್ಲಿಕ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. 1971ರಲ್ಲಿ ನಿರಂಕಾರಿ ಸೇವಾ ದಳಕ್ಕೆ ಸೇರ್ಪಡೆಯಾಗಿ ಪ್ರಾಥಮಿಕ ಸದಸ್ಯತ್ವ ಪಡೆದಿದ್ದರು.