

ಯುನೈಟೆಡ್ ನೇಷನ್ಸ್: ಸ್ವತಃ ಭಯೋತ್ಪಾದಕ ಸಂಘಟನೆಗಳೆಂದು ಗುರುತಿಸಿಕೊಂಡಿರುವ ಸಂಘಟನೆಗಳ ಮುಖ್ಯಸ್ಥರಿಗೆ ನಿಷೇಧ ವಿಧಿಸುವ ವಿಚಾರದಲ್ಲಿ ಸ್ಪಂದಿಸದ ವಿಶ್ವಸಂಸ್ಥೆಯನ್ನು ಭಾರತ ಟೀಕಿಸಿದೆ.
ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಗೆ ನಿಷೇಧ ವಿಧಿಸುವ ವಿಚಾರವಾಗಿ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಮಾತನಾಡಿರುವ ಭಾರತದ ಕಾಯಂ ಪ್ರತಿನಿಧಿ ಸಯೀದ್ ಅಕ್ಬರುದ್ದೀನ್, ಕೆಲವು ಸಂಘಟನೆಗಳು ತಮ್ಮನ್ನು ಸ್ವತಃ ಉಗ್ರ ಸಂಘಟನೆಗಳೆಂದು ಘೋಷಿಸಿಕೊಂಡಿವೆ. ಇಷ್ಟಾದರೂ ಅವುಗಳ ಮುಖ್ಯಸ್ಥರ ವಿರುದ್ಧ ನಿಷೇಧ ವಿಧಿಸುವ ವಿಚಾರದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿಷ್ಕ್ರಿಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೆ ವೇಳೆ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಗೆ ನಿಷೇಧ, ಆರ್ಥಿಕ ದಿಗ್ಬಂಧನ ಪಟ್ಟಿಗೆ ಸೇರಿಸುವ ಭಾರತದ ಮನವಿಗೆ ನಿರಂತರವಾಗಿ ಅಡ್ಡಗಾಲು ಹಾಕುತ್ತಿರುವ ಚೀನಾ ವಿರುದ್ಧವೂ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಸಯೀದ್ ಅಕ್ಬರುದ್ದೀನ್, ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಸ್ವತಃ ಉಗ್ರ ಸಂಘಟನೆಗಳೆಂದು ಘೋಷಿಸಿಕೊಂಡಿರುವ ಸಂಘಟನೆಗಳಿಗೆ ನಿಷೇಧ ವಿಧಿಸುವ ವಿಚಾರವಾಗಿ ಚಿಂತನೆ ನಡೆಸಲು 6 ತಿಂಗಳು ಬೇಕಾಗುತ್ತದೆ. ನಂತರ ತೀರ್ಮಾನ ಕೈಗೊಳ್ಳಲಾಗದೆ ಈ ವಿಷಯವನ್ನು ಪರಿಗಣಿಸಲೆಂದೇ ಮತ್ತೆ ಮೂರು ತಿಂಗಳ ಅವಧಿಯನ್ನು ಕೇಳುತ್ತದೆ. ಒಂದು ವಿಷಯದ ಬಗ್ಗೆ ವಿಶ್ವಸಂಸ್ಥೆಯ ನಿರ್ಧಾರವನ್ನು ತಿಳಿಯಲು ಒಟ್ಟು 9 ತಿಂಗಳು ಬೇಕಾಗುತ್ತದೆ ಕೆಲವೊಂದು ಸಂದರ್ಭಗಳಲ್ಲಿ ವಿಶ್ವಸಂಸ್ಥೆ ಭಯೋತ್ಪಾದಕ ಸಂಘಟನೆಗಳನ್ನು ಗುರುತಿಸಿ ಪಟ್ಟಿ ಮಾಡುವ ಪ್ರಕ್ರಿಯೆಯನ್ನೇ ಪ್ರಾರಂಭಿಸಿರುವುದಿಲ್ಲ ಎಂದು ವಿಶ್ವಸಂಸ್ಥೆ ಮಹಾಸಭೆಯ ಚರ್ಚೆಯಲ್ಲಿ ಸಯೀದ್ ಅಕ್ಬರುದ್ದೀನ್ ಭದ್ರತಾ ಮಂಡಳಿಯ ನಿಷ್ಕ್ರಿಯತೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ರಾಜಕೀಯ ಪಾರ್ಶ್ವವಾಯುವಿಗೆ ತುತ್ತಾದ, ಗೊಂದಲದ ಗೂಡಾಗಿರುವ ಸಂಘಟನೆ ಎಂದು ಕರೆಯಬಹುದಾಗಿದ್ದು, ಜಾಗತಿಕ ಆಡಳಿತ ಸಂಘಟನೆಯಾಗಿರುವ ಸಂಘಟನೆಗೆ ಸಮಗ್ರ ಸುಧಾರಣೆಯ ಅಗತ್ಯವಿದೆ ಎಂದು ಸಯೀದ್ ಅಕ್ಬರುದ್ದೀನ್ ಹೇಳಿದ್ದಾರೆ.
ಮಸೂದ್ ಅಜರ್ ಹೆಸರನ್ನು ಆರ್ಥಿಕ ದಿಗ್ಬಂಧನ ಪಟ್ಟಿಗೆ ಸೇರಿಸುವಂತೆ ಭಾರತ 2016 ರ ಮಾರ್ಚ್ ನಲ್ಲಿ ವಿಶ್ವಸಂಸ್ಥೆಯ 1267 ಸಮಿತಿಗೆ ಮನವಿ ಸಲ್ಲಿಸಿತ್ತು. ಆದರೆ ಈ ಮನವಿಗೆ ಅಡ್ಡಿ ಉಂಟು ಮಾಡಿದ್ದ ಚೀನಾ ಮೌಲಾನಾ ಮಸೂದ್ ಅಜರ್ ನ್ನು ಉಗ್ರ ಎನ್ನುವುದಕ್ಕೆ ಸ್ಪಷ್ಟ ಸಾಕ್ಷ್ಯಗಳಿಲ್ಲ ಎಂದು ಹೇಳಿತ್ತು. ಆರು ತಿಂಗಳು ಕಳೆದರೂ ಚೀನಾ ತನ್ನ ಉಗ್ರರಿಗೆ ಬೆಂಬಲ ನೀಡುವ ತನ್ನ ನಿಲುವನ್ನು ಬದಲಿಸಿಕೊಳ್ಳದೆ, ಇದೆ ವಿಚಾರವಾಗಿ ಮತ್ತೊಮ್ಮೆ ಭಾರತದ ಯತ್ನಕ್ಕೆ ಅಡ್ಡಿ ಉಂಟು ಮಾಡಿದೆ.
ಅಚ್ಚರಿಯೆಂದರೆ ಶಾಶ್ವತ ಸದಸ್ಯತ್ವ ಹೊಂದಿರುವ 15 ರಾಷ್ಟ್ರಗಳಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಯತ್ನಕ್ಕೆ ಅಷ್ಟೂ ರಾಷ್ಟ್ರಗಳು ಬೆಂಬಲ ನೀಡಿದ್ದರೆ, ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಗೆ ನಿಷೇಧ ವಿಧಿಸುವ ಭಾರತದ ಯತ್ನಕ್ಕೆ ವಿರುದ್ಧವಾಗಿ ನಿಂತಿರುವ ಏಕೈಕ ರಾಷ್ಟ್ರ ಚೀನಾ ಆಗಿದೆ.